May 5, 2026
Tuesday, May 5, 2026
spot_img

ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವ ಸಂಭ್ರಮ: ಮೇ 9 ರಂದು ಚಿತ್ರದುರ್ಗಕ್ಕೆ ಅಮಿತ್ ಶಾ ಭೇಟಿ

ಹೊಸದಿಗಂತ ವರದಿ, ಹಾವೇರಿ :

ಕರ್ನಾಟಕ ಬಿಜೆಪಿಯ ಭೀಷ್ಮ, ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ರೂವಾರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯ ರಾಜ್ಯಕಾರಣದಲ್ಲಿ ೫೦ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ 9ರಂದು ಹಮ್ಮಿಕೊಂಡಿರುವ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನಗರದ ಕಾಗಿನೆಲೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಬಾರಿ ಸಿಎಂ ಆಗಿ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದು, ಅವರ ಅಭಿಮಾನೋತ್ಸವ ಕಾರ್ಯಕ್ರಮದ ಮೂಲಕ ಮುಂದಿನ ಚುನಾವಣೆಗೆ ಬಿಜೆಪಿ ರಣಕಹಳೆ ಮೊಳಗಿಸಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 10ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಹಾವೇರಿ ಜಿಲ್ಲೆಯಿಂದಲೂ ಸಹ 50ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ವಿವಿಧ ಜಾತಿ, ಸಮುದಾಯಗಳ ಸ್ವಾಮೀಜಿಗಳು ಪಾಲ್ಗೊಂಡು ಬಿ.ಎಸ್.ವೈಗೆ ಆಶೀರ್ವದಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಬಿಎಸ್‌ವೈ ನಮ್ಮ ಶಕ್ತಿ, ಈ ಮೂಲಕ ಪಕ್ಷದ ಕಾರ್ಯಕರ್ತರಿಗೆ ಸಂಘಟನೆ ಮಾಡುವಂತೆ ಸಂದೇಶ ನೀಡುವ ಜತೆಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಬೇಸತ್ತಿದ್ದಾರೆ, ಹೀಗಾಗಿ ಕಾಂಗ್ರೆಸ್ ಸರ್ಕಾರಕ್ಕೂ ಎಚ್ಚರಿಕೆ ಗಂಟೆಯಾಗಲಿದೆ ಎಂದರು.

ಕ್ರೆಡಿಟ್ ವಾರ್‌ನಿಂದ ಸೋಲು : ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಪಕ್ಷದಲ್ಲಿನ ರಾಜ್ಯನಾಯಕರಲ್ಲಿನ ಹೊಂದಾಣಿಕೆ ಕೊರತೆ, ಅಸಹನೆ ಮತ್ತು ಈ ಗೆಲುವಿನಿಂದ ಅವರಿಗೆ ಕ್ರೆಡಿಟ್ ಹೋಗತ್ತೆ ಎಂದು ಸಣ್ಣತನದಿಂದಾಗಿ ಬಾಗಲಕೋಟೆ ಮತ್ತು ದಾವಣಗೆರೆಯನ್ನು ನಾವು ಕಳೆದುಕೊಂಡಿದ್ದೇವೆ. ಈಗಲೇ ಎಚ್ಚೆತ್ತುಕೊಂಡು ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯಿoದ ಸಂಘಟನೆ ಮಾಡಿದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲುವು ನಿಶ್ಚಿತ. ಈ ಕುರಿತಂತೆ ರಾಜ್ಯನಾಯಕರು ಕ್ರೆಡಿಟ್ ವಾರ್ ಕೈಬಿಟ್ಟು ಪಕ್ಷ ಸಂಘಟನೆಗೆ ಮುಂದಾಗಬೇಕು. ಈ ಮೂಲಕ ಆತ್ಮಾವಲೋಕನ ಮಾಡಿಕೊಂಡು ಈಗಲೂ ಸರಿಪಡಿಸಿಕೊಂಡರೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಗೆಲುವು ಖಚಿತ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಈಗಾಗಲೇ ಅಭಿಮಾನೋತ್ಸವಕ್ಕೆ ಸಕಲ ಸಿದ್ಧತೆ ನಡೆಸಿದ್ದೇವೆ. ಚಿತ್ರದುರ್ಗ ಇಲ್ಲಿಂದ ಸುಮಾರು 130-140 ಕೀಮಿ ದೂರದಲ್ಲಿದ್ದು, ಅಗತ್ಯ ಬಸ್ ಸೌಲಭ್ಯ ಮಾಡಲಾಗುತ್ತಿದೆ. ಆದಾಗ್ಯೂ ಸಾಕಷ್ಟು ಜನರು ತಮ್ಮ ವೈಯಕ್ತಿಕ ವಾಹನದಲ್ಲಿ ತೆರಳುವುದಾಗಿ ತಿಳಿಸಿದ್ದಾರೆ. ಸುಮಾರು 50-55ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.


ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಭರತ ಬೊಮ್ಮಾಯಿ, ಭೋಜರಾಜ ಕರೂದಿ, ವಿಜಯಕುಮಾರ ಚಿನ್ನಿಕಟ್ಟಿ, ನಿರಂಜನ ಹೇರೂರ ಮತ್ತಿತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !