May 8, 2026
Friday, May 8, 2026
spot_img

ಕಣಕುಂಬಿ ಚೆಕ್ ಪೋಸ್ಟ್‌ನಲ್ಲಿ ಅಕ್ರಮ ಮದ್ಯ ಸಾಗಾಟ: ಲಕ್ಷಾಂತರ ಮೌಲ್ಯದ ವಿಸ್ಕಿ, ಬಿಯರ್ ವಶಕ್ಕೆ

ಹೊಸದಿಗಂತ ಬೆಳಗಾವಿ:

ಜಿಲ್ಲೆಯ ಖಾನಾಪುರ ತಾಲೂಕಿನ ಗಡಿ ಭಾಗವಾದ ಕಣಕುಂಬಿಯಲ್ಲಿ ಅಬಕಾರಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋವಾದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮದ್ಯವನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ.

ಕಣಕುಂಬಿಯ ಅಬಕಾರಿ ತನಿಖಾ ಠಾಣೆಯ ಬಳಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ, ಗೋವಾ ರಾಜ್ಯದಿಂದ ಬರುತ್ತಿದ್ದ ಮಾರುತಿ ಸುಜುಕಿ ರಿಡ್ಜ್ ಕಾರು ಅನುಮಾನಾಸ್ಪದವಾಗಿ ಕಂಡುಬಂದಿದೆ. ಅಧಿಕಾರಿಗಳು ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಯಾವುದೇ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ ಅಕ್ರಮ ಮದ್ಯ ಪತ್ತೆಯಾಗಿದೆ.

ಈ ದಾಳಿಯಲ್ಲಿ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟಕ್ಕೆ ಅನುಮತಿಯಿದ್ದ 51.840 ಲೀಟರ್ ವಿಸ್ಕಿ ಮತ್ತು ರಮ್ ಹಾಗೂ 36 ಲೀಟರ್ ಬಿಯರ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಳ್ಳಲಾದ ಮದ್ಯ ಮತ್ತು ಕೃತ್ಯಕ್ಕೆ ಬಳಸಿದ ವಾಹನದ ಒಟ್ಟು ಮೌಲ್ಯ ಅಂದಾಜು 3,73,440 ರೂಪಾಯಿ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ನಿವಾಸಿ ಪ್ರಸಾದ್ ಶಂಕರ ಪುನಾಜಿ ಎಂಬಾತನನ್ನು ಅಬಕಾರಿ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ. ಅಬಕಾರಿ ಕಾಯ್ದೆಯ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಸದ್ಯ ತಲೆಮರೆಸಿಕೊಂಡಿರುವ ವಾಹನ ಮಾಲೀಕನಿಗಾಗಿ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ಗಡಿ ಭಾಗದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಅಬಕಾರಿ ಇಲಾಖೆ ಬಿಗಿ ಕ್ರಮ ಕೈಗೊಂಡಿದ್ದು, ಈ ಮಿಂಚಿನ ಕಾರ್ಯಾಚರಣೆಯು ಮದ್ಯದ ಕಳ್ಳಸಾಗಣೆದಾರರಲ್ಲಿ ನಡುಕ ಹುಟ್ಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !