ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯದ ದಶಕಗಳ ಇತಿಹಾಸ ಇಂದು ಬದಲಾಗಿದೆ. ಇಂದು ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸುವೇಂದು ಅಧಿಕಾರಿ ಅವರು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ಎನ್ ರವಿ ಅವರು ಅಧಿಕಾರಿ ಅವರಿಗೆ ಗೌಪ್ಯತೆಯ ಬೋಧನೆ ಮಾಡಿದರು.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಎನ್.ಡಿ.ಎ ಮೈತ್ರಿಕೂಟದ ಹಿರಿಯ ನಾಯಕರು ಆಗಮಿಸಿದ್ದರು. ವಿಶೇಷವೆಂದರೆ, ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಂದೇ ಈ ಸಮಾರಂಭ ನಡೆದಿರುವುದು ಬಂಗಾಳದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 294 ಕ್ಷೇತ್ರಗಳ ಪೈಕಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಕಳೆದ 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ತೃಣಮೂಲ ಕಾಂಗ್ರೆಸ್ ಕೇವಲ 80 ಸ್ಥಾನಗಳಿಗೆ ಸೀಮಿತಗೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿದೆ. ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಸುವೇಂದು ಅಧಿಕಾರಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷವು ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಿದೆ.
ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಮಿತ್ ಶಾ ಅವರು ಸುವೇಂದು ಅಧಿಕಾರಿ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದರು. “ಬಂಗಾಳದ ವಿಕಾಸ ಮತ್ತು ಸೋನಾರ್ ಬಾಂಗ್ಲಾ ನಿರ್ಮಾಣದ ಕನಸನ್ನು ನನಸು ಮಾಡಲು ಸುವೇಂದು ಸಮರ್ಥ ನಾಯಕ” ಎಂದು ಶಾ ಈ ಸಂದರ್ಭದಲ್ಲಿ ಬಣ್ಣಿಸಿದರು.



