ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕಾಂಗ್ರೆಸ್ ಶಾಸಕರು ಹೈಜಾಕ್ ಭೀತಿಯಿಂದ ಬೆಂಗಳೂರಿನ ರೆಸಾರ್ಟ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ ಎಂಬ ಸುದ್ದಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಳ್ಳಿಹಾಕಿದ್ದಾರೆ. ಪುದುಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಹಬ್ಬಿರುವ ಎಲ್ಲಾ ಮಾಹಿತಿಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದರು.
ಕಳೆದ ಕೆಲವು ದಿನಗಳಿಂದ ತಮಿಳುನಾಡು ಶಾಸಕರು ಬೆಂಗಳೂರಿನ ಈಗಲ್ಟನ್ ರೆಸಾರ್ಟ್‌ಗೆ ವಾಸ್ತವ್ಯ ಬದಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, “ಈಗಲ್ಟನ್ ರೆಸಾರ್ಟ್ ರಿಪೇರಿಗಾಗಿ ಮುಚ್ಚಿದೆ ಎಂಬುದೆಲ್ಲಾ ಸುಳ್ಳು ಸುದ್ದಿ. ಶಾಸಕರು ಹೈದರಾಬಾದ್‌ಗೆ ತೆರಳಿದ್ದಾರೆ ಎಂಬ ಸುದ್ದಿಯನ್ನು ನಾನು ಕೇವಲ ಟಿವಿಯಲ್ಲಿ ನೋಡಿದ್ದೇನೆಯೇ ಹೊರತು, ಹೈಕಮಾಂಡ್ ಈ ಬಗ್ಗೆ ನನ್ನೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ,” ಎಂದು ಹೇಳಿದರು.
ತಮಿಳುನಾಡು ರಾಜಕೀಯ ವಿದ್ಯಮಾನಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ ಮತ್ತು ಯಾವ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲ ಎಂದು ಅವರು ಇದೇ ವೇಳೆ ಖಚಿತಪಡಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಅಭಿಮಾನೋತ್ಸವದ ಬಗ್ಗೆಯೂ ಡಿಕೆಶಿ ಮಾತನಾಡಿದರು. “ಬಿಎಸ್ವೈ ಅವರು ರಾಜ್ಯಕ್ಕೆ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ರಾಜಕೀಯವಾಗಿ ನಮ್ಮ ಸಿದ್ಧಾಂತಗಳು ಭಿನ್ನವಾಗಿರಬಹುದು, ಆದರೆ ಅವರ ಸೇವೆಗೆ ನಾವು ಗೌರವ ನೀಡಲೇಬೇಕು. ಭಗವಂತ ಅವರಿಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯ ನೀಡಲಿ,” ಎಂದು ಹಾರೈಸಿದರು.



