ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಇಂದು ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಸಮಾರಂಭವು ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ., ಪ್ರಧಾನಿ ನರೇಂದ್ರ ಮೋದಿ 98 ವರ್ಷದ ಹಿರಿಯ ಬಿಜೆಪಿ ನಾಯಕ ಮಖನ್‌ಲಾಲ್ ಸರ್ಕಾರ್‌ರನ್ನು ಅಪ್ಪಿಕೊಂಡು ಗೌರವ ಸೂಚಕವಾಗಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದ ಈ ದೃಶ್ಯ ಎಲ್ಲರ ಗಮನ ಸೆಳೆದಿದೆ.
ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಅಧಿಕಾರಿ ಪ್ರಮಾಣವಚನ ಸ್ವೀಕಾರ ಸಮಾರಂಭವು ರಾಜ್ಯದಲ್ಲಿ ಬಿಜೆಪಿಯ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಿದೆ. ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಹಲವಾರು ಹಿರಿಯ ಎನ್‌ಡಿಎ ನಾಯಕರು ಭಾಗವಹಿಸಿದ್ದರು.
ಮಖನ್‌ಲಾಲ್ ಸರ್ಕಾರ್ ಯಾರು?
ಸಿಲಿಗುರಿ ನಿವಾಸಿಯಾದ ಮಖನ್‌ಲಾಲ್ ಸರ್ಕಾರ್ ಪಶ್ಚಿಮ ಬಂಗಾಳದ ಬಿಜೆಪಿಯ ಆರಂಭಿಕ ಹಂತದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.
1952ರಲ್ಲಿ ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಚಳವಳಿಯ ಸಂದರ್ಭದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜೊತೆಗಿದ್ದ ಇವರನ್ನು ಬಂಧಿಸಲಾಗಿತ್ತು. 1980ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ, ಇವರು ಪಶ್ಚಿಮ ದಿನಾಜ್‌ಪುರ, ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳ ಸಾಂಘಿಕ ಸಂಯೋಜಕರಾಗಿ ಸೇವೆ ಸಲ್ಲಿಸಿದರು. ಬಳಿಕ ಬಿಜೆಪಿ ಸ್ಥಾಪನೆಯಾದ ಕೇವಲ ಒಂದು ವರ್ಷದಲ್ಲಿ ಸುಮಾರು 10,000 ಸದಸ್ಯರನ್ನು ಪಕ್ಷಕ್ಕೆ ಸೇರಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಸಾಮಾನ್ಯವಾಗಿ ನಾಯಕರು ಎರಡು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿರುತ್ತಿದ್ದರು, ಆದರೆ ಸರ್ಕಾರ್ ಅವರು ಸತತ ಏಳು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಪರೂಪದ ಸಾಧನೆ ಮಾಡಿದ್ದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದೇಶಭಕ್ತಿ ಗೀತೆ ಹಾಡಿದ್ದಕ್ಕಾಗಿ ಇವರನ್ನು ಬಂಧಿಸಲಾಗಿತ್ತು. ಆಗ ನ್ಯಾಯಾಲಯದಲ್ಲಿ ಕ್ಷಮೆಯಾಚಿಸಲು ನಿರಾಕರಿಸಿದ ಇವರ ಧೈರ್ಯವನ್ನು ಕಂಡು, ನ್ಯಾಯಾಧೀಶರು ಇವರನ್ನು ಬಿಡುಗಡೆ ಮಾಡಿ ಗೌರವದಿಂದ ಮನೆಗೆ ಕಳುಹಿಸಿಕೊಟ್ಟಿದ್ದರು.
ಇದೀಗ 2026ರಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಮೊದಲ ಬಾರಿಗೆ ಸರ್ಕಾರ ರಚಿಸಿದಾಗ, ಈ ಐತಿಹಾಸಿಕ ಸಮಾರಂಭದಲ್ಲಿ ಮಖನ್‌ಲಾಲ್ ಸರ್ಕಾರ್ ಉಪಸ್ಥಿತಿಯು ಪಕ್ಷದ ಹಳೆಯ ಮತ್ತು ಹೊಸ ಪೀಳಿಗೆಯ ನಡುವಿನ ಕೊಂಡಿಯಂತೆ ಕಂಡುಬಂದಿದೆ.



