ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ನಟ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ ಅಚ್ಚರಿಯ ಗೆಲುವು ಸಾಧಿಸಿ ಸರ್ಕಾರ ರಚಿಸಲು ಸಜ್ಜಾಗಿರುವ ಬೆನ್ನಲ್ಲೇ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮಹತ್ವದ ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ವಿಜಯ್ ಅವರ ಪಕ್ಷವು ರಾಷ್ಟ್ರಮಟ್ಟದ INDIA ಒಕ್ಕೂಟವನ್ನು ಸೇರಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಚಿದಂಬರಂ, “ಟಿವಿಕೆ ಪಕ್ಷವನ್ನು ಇಂಡಿಯಾ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಮನವೊಲಿಸಬೇಕು ಎಂಬುದು ನನ್ನ ವೈಯಕ್ತಿಕ ಆಸೆ. ವಿಜಯ್ ಅವರ ರಾಜಕೀಯ ನಿಲುವುಗಳು ಒಕ್ಕೂಟದ ಸಿದ್ಧಾಂತಕ್ಕೆ ಪೂರಕವಾಗಿರಲಿವೆ ಎಂಬ ನಂಬಿಕೆ ನಮಗಿದೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಅವರು ಕಾಂಗ್ರೆಸ್ ವಿರುದ್ಧ ಕೆಲ ಅಸಮಾಧಾನಗಳನ್ನು ಹೊರಹಾಕಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಚಿದಂಬರಂ, “ಸ್ಟಾಲಿನ್ ಅವರು ಕಾಂಗ್ರೆಸ್ ಪಕ್ಷದ ಕೆಲವು ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ಹೊರತು, ಇಂಡಿಯಾ ಒಕ್ಕೂಟದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿಲ್ಲ. ಅವರು ರಾಷ್ಟ್ರಮಟ್ಟದ ಮೈತ್ರಿಯಲ್ಲಿ ಮುಂದುವರಿಯಲಿದ್ದಾರೆ” ಎಂದು ಭರವಸೆ ನೀಡಿದರು.
ರಾಜ್ಯ ರಾಜಕಾರಣದ ಸಂಕೀರ್ಣತೆಯನ್ನು ವಿವರಿಸಿದ ಅವರು, “ಕೇರಳದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಪರಸ್ಪರ ವಿರುದ್ಧವಾಗಿ ಹೋರಾಡುತ್ತವೆ. ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಎದುರಿಸಲು ಇಂಡಿಯಾ ಒಕ್ಕೂಟದ ಅಡಿಯಲ್ಲಿ ಒಂದಾಗಿವೆ. ಅದೇ ಮಾದರಿ ತಮಿಳುನಾಡಿನಲ್ಲೂ ಟಿವಿಕೆ ಮತ್ತು ಡಿಎಂಕೆ ವಿಷಯದಲ್ಲಿ ಅನ್ವಯವಾಗಬಹುದು” ಎಂದು ವಿಶ್ಲೇಷಿಸಿದರು.



