ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ರಾಜಕಾರಣದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಸ್ಥಾಪಕ, ಚಿತ್ರರಂಗದ ಜನಪ್ರಿಯ ನಟ ದಳಪತಿ ವಿಜಯ್ ಇಂದು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.
ಮುಂಜಾನೆ ನಡೆದ ಈ ಭವ್ಯ ಸಮಾರಂಭಕ್ಕೆ ರಾಜಕೀಯ ಗಣ್ಯರು ಹಾಗೂ ಚಿತ್ರರಂಗದ ಪ್ರಮುಖ ತಾರೆಯರು ಸಾಕ್ಷಿಯಾದರು. ಈ ಸಮಾರಂಭದಲ್ಲಿ ವಿಜಯ್ ಆಪ್ತ ಗೆಳತಿ ಹಾಗೂ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಉಪಸ್ಥಿತಿ ಎಲ್ಲರ ಗಮನ ಸೆಳೆಯಿತು.
ವಿಜಯ್ ರಾಜಕೀಯ ಜೀವನದ ಅತ್ಯಂತ ಪ್ರಮುಖ ದಿನವಾದ ಇಂದು, ಅವರ ಇಷ್ಟು ವರ್ಷಗಳ ಚಿತ್ರರಂಗದ ಯಶಸ್ಸಿನ ಭಾಗವಾಗಿದ್ದ ನಟಿ ತ್ರಿಶಾ ಸಮಾರಂಭಕ್ಕೆ ಆಗಮಿಸಿದ್ದರು. ತಿಳಿ ಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ನಗುನಗುತ್ತಾ ವಿವಿಐಪಿ ಗ್ಯಾಲರಿಗೆ ಆಗಮಿಸಿದ ತ್ರಿಶಾ ಅವರ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ತಮಿಳುನಾಡಿನ ರಾಜ್ಯಪಾಲರು ನಟ ವಿಜಯ್ಗೆ ಮುಖ್ಯಮಂತ್ರಿಯಾಗಿ ಅಧಿಕಾರ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಈ ವೇಳೆ ತಮಿಳಗ ವೆಟ್ರಿ ಕಳಗಂ ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಕ್ರೀಡಾಂಗಣದ ಸುತ್ತಮುತ್ತ ಜಮಾಯಿಸಿ ಜಯಘೋಷ ಮೊಳಗಿಸಿದರು. ಡಿಎಂಕೆ ಮತ್ತು ಇತರ ಮೈತ್ರಿಕೂಟಗಳ ನಡುವಿನ ರಾಜಕೀಯ ಪೈಪೋಟಿಯ ಮಧ್ಯೆಯೂ ವಿಜಯ್ ಅತ್ಯಂತ ವ್ಯವಸ್ಥಿತವಾಗಿ ಮೈತ್ರಿ ಸರ್ಕಾರವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.



