May 11, 2026
Monday, May 11, 2026
spot_img

ಪ್ರಧಾನಿ ಮೋದಿಯ ಒಂದೇ ಒಂದು ಕರೆಗೆ ಧರೆಗುರುಳಿದ ಬಂಗಾರದ ಬೆಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಲ್ಲಿ ಒಂದು ಮಹತ್ವದ ಮನವಿ ಮಾಡಿದ್ದಾರೆ. ಮುಂಬರುವ ಒಂದು ವರ್ಷದವರೆಗೆ ಭಾರತೀಯರು ಮದುವೆ ಹಾಗೂ ಇತರ ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಹೇಳಿಕೆಯು ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರಿದ್ದು, ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಮೋದಿ ಅವರ ಈ ಕರೆಯ ಬೆನ್ನಲ್ಲೇ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ನಲ್ಲಿ ಜೂನ್ ತಿಂಗಳ ಚಿನ್ನದ ಫ್ಯೂಚರ್ ಕಾಂಟ್ರಾಕ್ಟ್ ಬೆಲೆಯಲ್ಲಿ ಸುಮಾರು 574 ರೂ.ಗಳಷ್ಟು ಕುಸಿತ ಕಂಡುಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ವ್ಯವಹಾರವು ಪ್ರತಿ 10 ಗ್ರಾಂಗೆ 1,53,669 ರೂ. ಆಸುಪಾಸಿನಲ್ಲಿ ಸಾಗುತ್ತಿದೆ.

ಚಿನ್ನದ ದರ ಇಳಿಕೆಯಾಗಿದ್ದರೂ, ಬೆಳ್ಳಿಯ ಮಾರುಕಟ್ಟೆಯಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಜೂನ್ ಫ್ಯೂಚರ್ ಬೆಳ್ಳಿ ದರವು 698 ರೂ. (ಸುಮಾರು 26%) ಏರಿಕೆಯಾಗಿದ್ದು, 2,65,957 ರೂ. ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಈ ಬೆಲೆಗಳು ಮಾರುಕಟ್ಟೆಯ ಅಂತ್ಯದ ವೇಳೆಗೆ (ಸಂಜೆ 3:30) ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಇಂತಹ ಸವಾಲಿನ ಸಮಯದಲ್ಲಿ ದೇಶದ ಆರ್ಥಿಕತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಮೋದಿ ತಿಳಿಸಿದ್ದಾರೆ.

ಭಾರತವು ತನ್ನ ಚಿನ್ನದ ಅಗತ್ಯತೆಗಾಗಿ ಹೆಚ್ಚಾಗಿ ಆಮದಿನ ಮೇಲೆ ಅವಲಂಬಿತವಾಗಿದೆ. ಚಿನ್ನದ ಆಮದಿಗಾಗಿ ದೇಶದ ಅಮೂಲ್ಯವಾದ ವಿದೇಶಿ ವಿನಿಮಯ ದೊಡ್ಡ ಪ್ರಮಾಣದಲ್ಲಿ ಖರ್ಚಾಗುತ್ತಿದೆ. ಈ ಆಮದು ವೆಚ್ಚವನ್ನು ತಗ್ಗಿಸುವ ಮೂಲಕ ರೂಪಾಯಿಯ ಮೌಲ್ಯವನ್ನು ಸ್ಥಿರವಾಗಿಡುವುದು ಮತ್ತು ಆರ್ಥಿಕತೆಯನ್ನು ಗಟ್ಟಿಗೊಳಿಸುವುದು ಈ ಕರೆಯ ಪ್ರಮುಖ ಉದ್ದೇಶವಾಗಿದೆ.

ದೇಶದ ಆರ್ಥಿಕ ಆತ್ಮನಿರ್ಭರತೆಗೆ ಚಿನ್ನದ ಮೇಲಿನ ವ್ಯಾಮೋಹವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವಂತೆ ಪ್ರಧಾನಿ ಕೋರಿದ್ದಾರೆ. ಇದು ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಭಾರತದ ಆರ್ಥಿಕತೆಗೆ ರಕ್ಷಣಾ ಕವಚವಾಗಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !