May 11, 2026
Monday, May 11, 2026
spot_img

ಕಾಲೇಜುಗಳಿಗೆ ಸರಿಯಾಗಿ ಬಸ್‌ ಬಿಡಿ: ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಂದ ಬೃಹತ್‌ ಪ್ರತಿಭಟನೆ

ಹೊಸದಿಗಂತ ವರದಿ ಹಾವೇರಿ:

ದೇವಗಿರಿಯ ಸರ್ಕಾರಿ ಇಂಜನೀಯರಿಂಗ್, ಮಹಿಳಾ ಕಾಲೇಜು ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ ಗಳನ್ನು ಸಕಾಲಕ್ಕೆ ಓಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಎದುರು ಎಲ್ಲಾ ಮಾರ್ಗದ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಕಳೆದ ಕೆಲವು ದಿನಗಳಿಂದ ಇಂಜನೀಯರಿಂಗ್ ಕಾಲೇಜು, ಮಹಿಳಾ ಕಾಲೇಜು ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ ಗಳು ಸಕಾಲಕ್ಕೆ ಓಡಿಸುತ್ತಿಲ್ಲ. ಯಾವಾಗ ಕೇಳಿದರೂ ಮೂರು ಬಸ್ ಬಿಡಲಾಗಿದೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಬಸ್ ತಡವಾದಲ್ಲಿ ಎರಡು ಅವಧಿಗಳನ್ನು ಕಳೆದುಕೊಳ್ಳ ಬೇಕಾಗುತ್ತದೆ ಎಂದು ದೂರಿದರು.

ಈಗಾಗಲೇ ಬೆಳಗ್ಗೆ 8.30ರಿಂದ ಒಡಿಸಬೇಕಾದ ಕೆಲವು ಬಸ್ ಗಳನ್ನು ಅರ್ಧ ಗಂಟೆ ತಡವಾಗಿ ಒಡಿಸುತ್ತಿದ್ದು ಇದರಿಂದ ದಿನನಿತ್ಯ ಬೆಳಗಿನ ಒಂದು ಅವಧಿಯ ತರಗತಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ಅಧ್ಯಯನ ದಲ್ಲಿ ಹಿನ್ನಡೆ ಆಗುತ್ತಿದೆ. ಇದರಿಂದ ನಮ್ಮ ಭವಿಷ್ಯದಲ್ಲಿ ತೊದರೆಯಾಗಲಿದೆ ಎಂದು ಆತಂಕ ಹೊರ ಹಾಕಿದರು.

ಬಸ್ ನಿಲ್ದಾಣದಿಂದ ಹೊರ ಹೋಗುವ ಎಲ್ಲಾ ಮಾರ್ಗದ ಬಸ್ ಗಳನ್ನು ತಡೆದು ನಿಲ್ಲಿಸಿ ಅಸಮಾಧಾನ ಹೊರಹಾಕಿದರು. ಸಾರಿಗೆ ಇಲಾಖೆಯ ಹಲವು ಸಿಬ್ಬಂದಿ ಮತ್ತು ಪೊಲೀಸರು ಮಾಡಿದ ಮನವೊಲಿಕೆ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಸ್ಪಂದಿಸದೇ ಇದ್ದಾಗ, ಸಾರಿಗೆ ಇಲಾಖೆಯ ಡಿಟಿಒ ಪಾಟೀಲ ಘಟನಾ ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ತಕ್ಷಣ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.

ಈ ವೇಳೆ ಪ್ರತಿಭಟನೆಯಲ್ಲಿ ಇಂಜನೀಯರಿಂಗ್ ಕಾಲೇಜು, ಮಹಿಳಾ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !