ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಕೆಲವು ನಿರ್ದಿಷ್ಟ ಕೆಲಸಗಳನ್ನು ಮಾಡುವಂತೆ ಕರೆ ನೀಡಿದ್ದಾರೆ. ಇವುಗಳಲ್ಲಿ ಚಿನ್ನದ ಖರೀದಿ ನಿಲ್ಲಿಸುವುದು, ವಿದೇಶಿ ಪ್ರವಾಸ ಮುಂದೂಡುವುದು ಮತ್ತು ಮತ್ತೆ ವರ್ಕ್ ಫ್ರಂ ಹೋಮ್ ಸಂಸ್ಕೃತಿಗೆ ಮಾರುಹೋಗುವಂತಹ ಅಂಶಗಳು ಸೇರಿವೆ. ಈ ಕರೆಗಳು ಸಾರ್ವಜನಿಕರಲ್ಲಿ ಕುತೂಹಲ ಮಾತ್ರವಲ್ಲದೆ, ‘ಮತ್ತೆ ಕೋವಿಡ್ ಅಲೆಯಂತಹ ವಿಪತ್ತು ಎದುರಾಗಲಿದೆಯೇ?’ ಎಂಬ ಆತಂಕವನ್ನೂ ಮೂಡಿಸಿವೆ. ಆದರೆ, ಈ ಕರೆಗಳ ಹಿಂದೆ ಆರೋಗ್ಯ ತುರ್ತುಸ್ಥಿತಿಗಿಂತ ಹೆಚ್ಚಾಗಿ ‘ದೇಶದ ಆರ್ಥಿಕ ಭದ್ರತೆ’ ಅಡಗಿದೆ.
ಮೋದಿ ನೀಡಿದ ಆ 9 ಪ್ರಮುಖ ಕರೆಗಳು ಯಾವುವು?
ವರ್ಕ್ ಫ್ರಂ ಹೋಮ್: ಅನಗತ್ಯ ಪ್ರಯಾಣ ತಪ್ಪಿಸಲು ಕಚೇರಿ ಕೆಲಸಗಳನ್ನು ಮನೆಯಿಂದಲೇ ಮಾಡಲು ಆದ್ಯತೆ ನೀಡಿ.
ಸಾರ್ವಜನಿಕ ಸಾರಿಗೆ ಬಳಕೆ: ವೈಯಕ್ತಿಕ ವಾಹನಗಳ ಬದಲಿಗೆ ಮೆಟ್ರೋ ಅಥವಾ ಬಸ್ ಬಳಸಿ. ಕಾರ್ ಪೂಲಿಂಗ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು ನೀಡಿ.
ನೈಸರ್ಗಿಕ ಕೃಷಿ: ರಾಸಾಯನಿಕ ಗೊಬ್ಬರಗಳ ಬಳಕೆ ಶೇ. 50ರಷ್ಟು ತಗ್ಗಿಸಿ, ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಿ.
ಚಿನ್ನದ ವ್ಯಾಮೋಹ ಬೇಡ: ಕನಿಷ್ಠ ಒಂದು ವರ್ಷ ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸುವುದನ್ನು ನಿಲ್ಲಿಸಿ.
ವಿದೇಶಿ ಪ್ರವಾಸ ಮುಂದೂಡಿ: ರಜೆ ಕಳೆಯಲು ವಿದೇಶಕ್ಕೆ ಹೋಗುವ ಬದಲು ದೇಶೀಯ ಪ್ರವಾಸೋದ್ಯಮಕ್ಕೆ ಶಕ್ತಿ ನೀಡಿ.
ಸ್ವದೇಶಿ ಬಳಕೆ: ವಿದೇಶಿ ಬ್ರ್ಯಾಂಡ್ಗಳ ವ್ಯಾಮೋಹ ಬಿಟ್ಟು ಭಾರತೀಯ ಉತ್ಪನ್ನಗಳನ್ನು ಬಳಸಿ.
ಅಡುಗೆ ಎಣ್ಣೆ ಮಿತ ಬಳಕೆ: ಆಮದಾಗುವ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ.
ಜನರು ಆತಂಕ ಪಡುತ್ತಿರುವಂತೆ ಇದು ಕೋವಿಡ್ ಸೂಚನೆಯಲ್ಲ. ಬದಲಾಗಿ, ಭಾರತದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಉಳಿಸುವ ತಂತ್ರವಾಗಿದೆ. ಭಾರತವು ಸದ್ಯ ದೊಡ್ಡ ಪ್ರಮಾಣದ ಚಾಲ್ತಿ ಖಾತೆ ಕೊರತೆಯನ್ನು ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳು.
ಭಾರತದ ಒಟ್ಟು ಆಮದು ವೆಚ್ಚದಲ್ಲಿ ಈ ಕೆಳಗಿನ ವಸ್ತುಗಳ ಪಾಲು ಬೃಹತ್ ಆಗಿದೆ:
ಜಗತ್ತಿನಲ್ಲಿ ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವುದು ಭಾರತ. 2025-26ರಲ್ಲಿ ಸುಮಾರು 72 ಬಿಲಿಯನ್ ಡಾಲರ್ ಮೊತ್ತದ ಚಿನ್ನ ಆಮದಾಗಿದೆ. ಇದು ದೇಶದ ಒಟ್ಟು ಆಮದು ವೆಚ್ಚದ ಶೇ. 9ರಷ್ಟಿದೆ.
ಇಂಧನಕ್ಕಾಗಿ ಭಾರತ 134.7 ಬಿಲಿಯನ್ ಡಾಲರ್ ವೆಚ್ಚ ಮಾಡುತ್ತಿದೆ.
ರಸಗೊಬ್ಬರ ಮತ್ತು ಅಡುಗೆ ಎಣ್ಣೆ ಇವುಗಳ ಆಮದೂ ಸಹ ಕೋಟ್ಯಂತರ ರೂಪಾಯಿಗಳನ್ನು ವಿದೇಶಕ್ಕೆ ಹರಿಯುವಂತೆ ಮಾಡುತ್ತಿದೆ.
ಒಟ್ಟಾರೆಯಾಗಿ, 2025-26ರ ಸಾಲಿನಲ್ಲಿ ಭಾರತದ ಒಟ್ಟು ಆಮದು ವೆಚ್ಚ 775 ಬಿಲಿಯನ್ ಡಾಲರ್ ಆಗಿದ್ದು, ಅದರಲ್ಲಿ ಪ್ರಧಾನಿ ಪ್ರಸ್ತಾಪಿಸಿದ ಈ ನಾಲ್ಕು ವಸ್ತುಗಳ ಪಾಲು ಮಾತ್ರವೇ 240.7 ಬಿಲಿಯನ್ ಡಾಲರ್ (ಅಂದರೆ ಶೇ. 31.1) ಆಗಿದೆ.
ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಮೂಲಕ ದೇಶದ ಹಣ ದೇಶದ ಒಳಗೇ ಉಳಿಯುವಂತೆ ಮಾಡುವುದು ಪ್ರಧಾನಿಯವರ ಈ ಕರೆಯ ಹಿಂದಿನ ಮುಖ್ಯ ಗುರಿ. ಪೆಟ್ರೋಲಿಯಂ ಮತ್ತು ಚಿನ್ನದ ಮೇಲಿನ ಅವಲಂಬನೆ ತಗ್ಗಿದರೆ ರೂಪಾಯಿಯ ಮೌಲ್ಯ ವೃದ್ಧಿಯಾಗುವುದಲ್ಲದೆ, ಆರ್ಥಿಕವಾಗಿ ಭಾರತ ಮತ್ತಷ್ಟು ಸಬಲವಾಗಲಿದೆ. ಆದ್ದರಿಂದ, ಈ ಕರೆಗಳು ಮುನ್ನೆಚ್ಚರಿಕೆಯ ಕ್ರಮಗಳೇ ಹೊರತು ಯಾವುದೇ ವಿಪತ್ತಿನ ಸೂಚನೆಯಲ್ಲ.



