May 11, 2026
Monday, May 11, 2026
spot_img

ಕೃನಾಲ್ ಪಾಂಡ್ಯ ‘ಅಲ್ಲೇ ಸಾಯಲಿ’: ಕಾಮೆಂಟರಿ ಬಾಕ್ಸ್‌ನಲ್ಲಿ ಮಾನವೀಯತೆ ಮರೆತ ಮಾಜಿ ಕ್ರಿಕೆಟಿಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೈದಾನದಲ್ಲಿ ಆಟಗಾರರ ನಡುವಿನ ಪಂದ್ಯ ಜಿದ್ದಾಜಿದ್ದಿನಿಂದ ಕೂಡಿರಬಹುದು, ಆದರೆ ಮಾನವೀಯತೆ ಯಾವಾಗಲೂ ದೊಡ್ಡದು. ಆದರೆ, ಐಪಿಎಲ್ 2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಕಾಮೆಂಟರಿ ಬಾಕ್ಸ್‌ನಿಂದ ಬಂದ ಒಂದು ಹೇಳಿಕೆ ಈಗ ಇಡೀ ಕ್ರಿಕೆಟ್ ಲೋಕದ ಆಕ್ರೋಶಕ್ಕೆ ಕಾರಣವಾಗಿದೆ. ಆರ್‌ಸಿಬಿ ಆಟಗಾರ ಕೃನಾಲ್ ಪಾಂಡ್ಯ ಅವರ ಗಾಯದ ಬಗ್ಗೆ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದರಿನಾಥ್ ಮಾಡಿರುವ ಅಮಾನವೀಯ ಕಾಮೆಂಟ್ ಈಗ ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದೆ.

ಮೇ 10 ರಂದು ರಾಯ್ಪುರದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಪರ ಕೃನಾಲ್ ಪಾಂಡ್ಯ ಏಕಾಂಗಿ ಹೋರಾಟ ನಡೆಸುತ್ತಿದ್ದರು. ಮುಂಬೈ ನೀಡಿದ್ದ ಗುರಿಯನ್ನು ಬೆನ್ನಟ್ಟುವ ವೇಳೆ ತೀವ್ರ ಕಾಲು ಸೆಳೆತಕ್ಕೆ ಒಳಗಾದ ಕೃನಾಲ್, ನೋವಿನಿಂದ ಕ್ರೀಸ್‌ನಲ್ಲೇ ಕುಸಿದು ಬಿದ್ದರು. ಈ ವೇಳೆ ಎದುರಾಳಿ ತಂಡದ ವಿಕೆಟ್ ಕೀಪರ್ ರಯಾನ್ ರಿಕೆಲ್ಟನ್ ಓಡಿ ಬಂದು ಕೃನಾಲ್ ಅವರ ಕಾಲನ್ನು ಎತ್ತಿ ಹಿಡಿದು ಪ್ರಥಮ ಚಿಕಿತ್ಸೆ ನೀಡುವ ಮೂಲಕ ಕ್ರೀಡಾ ಮನೋಭಾವ ಮೆರೆದಿದ್ದರು.

ಈ ಸುಂದರ ಕ್ರೀಡಾ ಮನೋಭಾವದ ದೃಶ್ಯವನ್ನು ವಿಶ್ಲೇಷಿಸುವಾಗ ಕಾಮೆಂಟೇಟರ್ ಸುಬ್ರಮಣ್ಯಂ ಬದರಿನಾಥ್ ಮಿತಿ ಮೀರಿ ಮಾತನಾಡಿದ್ದಾರೆ. ರಿಕೆಲ್ಟನ್ ಸಹಾಯ ಮಾಡುತ್ತಿರುವುದನ್ನು ನೋಡಿ, “ಅವನಿಗೆ ಸಹಾಯ ಮಾಡಬೇಡಿ, ಅವನು ಅಲ್ಲೇ ಸಾಯಲಿ, ಆಗಲಾದರೂ ಆರ್‌ಸಿಬಿ ಸೋಲಲಿ” ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದಾರೆ. ಒಬ್ಬ ಮಾಜಿ ಆಟಗಾರನಾಗಿ, ಗಾಯದ ನೋವಿನಲ್ಲಿದ್ದ ಮತ್ತೊಬ್ಬ ಆಟಗಾರನ ಬಗ್ಗೆ “ಸಾಯಲಿ” ಎಂಬ ಪದ ಬಳಸಿರುವುದು ಅಭಿಮಾನಿಗಳನ್ನು ಕೆರಳಿಸಿದೆ.

ಬದರಿನಾಥ್ ಅವರ ಈ “ಟಾಕ್ಸಿಕ್” ಕಾಮೆಂಟರಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಕ್ಸ್ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿವೆ. “ಕಾಮೆಂಟರಿ ಎಂಬುದು ಆಟದ ವಿಶ್ಲೇಷಣೆಯೇ ಹೊರತು ಆಟಗಾರರ ಜೀವದ ಜೊತೆ ಚೆಲ್ಲಾಟವಾಡುವುದಲ್ಲ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸಿಎಸ್​ಕೆ ತಂಡದ ಮಾಜಿ ಆಟಗಾರನ ಈ ನಡವಳಿಕೆಯನ್ನು ಖಂಡಿಸಿರುವ ಅಭಿಮಾನಿಗಳು, ಬಿಸಿಸಿಐ ಮತ್ತು ಸ್ಟಾರ್ ಸ್ಪೋರ್ಟ್ಸ್ ಇಂತಹವರನ್ನು ಕೂಡಲೇ ಪ್ಯಾನಲ್‌ನಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !