May 13, 2026
Wednesday, May 13, 2026
spot_img

ಕೊರಗಜ್ಜ ವೃತ್ತ ಆಕ್ಷೇಪಿಸಿ ಸ್ಪೀಕರ್ ಖಾದರ್ ಗೆ ಘೇರಾವ್: ಹನ್ನೊಂದು ಮಂದಿಯ ವಿರುದ್ಧ ಪ್ರಕರಣ ದಾಖಲು

ಹೊಸದಿಗಂತ ಉಳ್ಳಾಲ:


ಮಂಗಳೂರು ನಗರದ ಹೊರವಲಯ ಕುತ್ತಾರು ಜಂಕ್ಷನ್ ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣದ ವಿಚಾರದಲ್ಲಿ ಭದ್ರತಾ ಸಿಬ್ಬಂದಿಯನ್ನ ತಳ್ಳಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಘೇರಾವ್ ಹಾಕಿ ತರಾಟೆಗೈದ ಮದನಿ ನಗರದ ಜುನೈದ್ ಮತ್ತು ಆತನ ಹತ್ತು ಜನ ಸಹಚರರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಸ್ಪೀಕರ್ ಯು.ಟಿ. ಖಾದರ್ ಅವರ ಅಂಗ ರಕ್ಷಕ ಸಿಎಸ್ ಆರ್ ಘಟಕದ ಸಿಬ್ಬಂದಿ, ಮೊಹಮ್ಮದ್ ಯಾಸೀನ ಇನಾಮದಾರ ನೀಡಿರುವ ದೂರಿನ ಆಧಾರದಡಿ ಉಳ್ಳಾಲ ಠಾಣೆಯಲ್ಲಿ ಹನ್ನೊಂದು ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.


ಏನಿದು ಘಟನೆ?
ಕಳೆದ ಮೇ.7 ರ ಗುರುವಾರ ರಾತ್ರಿ 10 ಗಂಟೆ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರು ಉಳ್ಳಾಲ ಮಾಸ್ತಿಕಟ್ಟೆಯ ರೆಸಾರ್ಟ್ ಒಂದರಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವ ವೇಳೆ ಮದನಿ ನಗರದ ಜುನೈದ್ ಹಾಗೂ ಇತರ ಹತ್ತು ಮಂದಿ ಏಕಾ ಏಕಿ ಸ್ಪೀಕರ್ ಬಳಿ ಹೋಗುವಾಗ ಅಂಗರಕ್ಷಕರಾದ ಮೊಹಮ್ಮದ್ ಯಾಸೀನ ಅವರನ್ನು ತಡೆದಿದ್ದು , ಈಗಾಗಲೇ ಬಹಳ ತಡವಾಗಿದೆ ಎಂದು ಹೇಳಿ ಸ್ಪೀಕರ್ ಭೇಟಿಗೆ ಅವಕಾಶ ನಿರಾಕರಿಸಿದ್ದರು.


ಈ ವೇಳೆ ಜುನೈದ್ ಹಾಗೂ ಸಹಚರರು ಅಂಗರಕ್ಷಕ ಯಾಸೀನ್ ಅವರನ್ನ ತಳ್ಳಿ ಮುನ್ನುಗ್ಗಿದ್ದು, ಸ್ಪೀಕರ್ ಖಾದರ್ ಅವರನ್ನ ಘೇರಾವ್ ಹಾಕಿ ಏರು ಧ್ವನಿಯಲ್ಲಿ ಕುತ್ತಾರು ಕೊರಗಜ್ಜನ ವೃತ್ತದ ವಿಚಾರದಲ್ಲಿ ತರಾಟೆಗೈದಿದ್ದಲ್ಲದೆ, ಅದರ ವೀಡಿಯೋವನ್ನು ಆಕ್ಷೇಪಾರ್ಹ ಬರಹಗಳೊಂದಿಗೆ ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದಾಗಿ ಗನ್ ಮ್ಯಾನ್ ಮೊಹಮ್ಮದ್ ಯಾಸೀನ ಅವರು ತನ್ನ ಮೇಲಾಧಿಕಾರಿಗಳ ಸೂಚನೆಯಂತೆ ಮೇ.9 ರಂದು ತಡವಾಗಿ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಬರುವ ಭಕ್ತಾಧಿಗಳಿಗೆ ಮಾಹಿತಿ ನೀಡುವುದಕ್ಕಾಗಿ ವರುಷಗಳ ಹಿಂದೆ ಕುತ್ತಾರು ಜಂಕ್ಷನ್ ನಲ್ಲಿ ಸ್ಥಳೀಯ ಬಜರಂಗದಳ ಸಂಘಟನೆಯು ಕೊರಗಜ್ಜನ ಮುಟ್ಟಾಳೆ ಹಾಗೂ ದಂಟೆಯ ಪ್ರತಿಕೃತಿಯುಳ್ಳ ಸಣ್ಣ ವೃತ್ತವೊಂದನ್ನ ನಿರ್ಮಿಸಿತ್ತು. ಇದೀಗ ಆ ಸಣ್ಣ ವೃತ್ತವನ್ನ ತೆರವುಗೊಳಿಸಿ ನಿಟ್ಟೆ ಪರಿಗಣಿತ ವಿವಿಯು ನೂತನ ವೃತ್ತವೊಂದನ್ನು ನಿರ್ಮಿಸುತ್ತಿದೆ.

ಈ ಮಧ್ಯೆ ಕುತ್ತಾರಿನಲ್ಲಿ ಕೊರಗಜ್ಜನ ಹೆಸರಲ್ಲಿ ವೃತ್ತ ನಿರ್ಮಾಣವಾಗಬಾರದೆಂದು ಕುತ್ತಾರು ಮದನಿನಗರದ ಮುಸ್ಲಿಮರ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿ ಸ್ಪೀಕರ್ ಖಾದರ್ ಅವರನ್ನ ಘೇರಾವ್ ಮಾಡಿ ತರಾಟೆಗೈದಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಸಂಚಲನ ಉಂಟು ಮಾಡಿದ್ದಲ್ಲದೆ, ಸ್ಪೀಕರ್ ಅವರ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆ ಹುಟ್ಟು ಹಾಕಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !