May 13, 2026
Wednesday, May 13, 2026
spot_img

ಈ ಬಾಲಕಿಯ ಧೈರ್ಯಕ್ಕೆ ಸಲಾಂ: ಸಾರ್ವಜನಿಕ ಅಹವಾಲು ಸಭೆಯಲ್ಲೇ ಭ್ರಷ್ಟ ವ್ಯವಸ್ಥೆ ವಿರುದ್ಧ ದೂರು!

ಹೊಸದಿಗಂತ ಮದ್ದೂರು:

ತಂದೆ-ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಬಾಲಕಿಯೊಬ್ಬಳ ಜಮೀನಿನ ಖಾತೆ ಬದಲಾವಣೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ಮದ್ದೂರಿನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳ ಈ ಉಡಾಫೆ ವರ್ತನೆಯಿಂದ ಬೇಸತ್ತ ಬಾಲಕಿ, ಬುಧವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರದ ವೇಳೆ ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾಳೆ.

ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದ ನಿವಾಸಿ ಡಿ.ವಿ. ಅಸ್ಮಿತಾ (18) ಎಂಬಾಕೆಯೇ ಧೈರ್ಯ ತೋರಿದ ಯುವತಿ. ಈಕೆ ದ್ವಿತೀಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾಳೆ. ಅಸ್ಮಿತಾ ತನ್ನ ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡಿದ್ದಳು. ಆರು ತಿಂಗಳ ಹಿಂದಷ್ಟೇ ತಂದೆಯೂ ಮೃತಪಟ್ಟಿದ್ದರಿಂದ ಸದ್ಯ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ.

ಅಸ್ಮಿತಾಳ ತಂದೆಯ ಹೆಸರಿನಲ್ಲಿ ಕೂಳಗೆರೆ ಗ್ರಾಮದ ಸರ್ವೆ ನಂ. 194/1 ಮತ್ತು 195/1 ರಲ್ಲಿ ಜಮೀನು ಇತ್ತು. ತಂದೆಯ ಮರಣಾನಂತರ ಈ ಜಮೀನನ್ನು ತನ್ನ ಹೆಸರಿಗೆ ‘ಪೌತಿ ಖಾತೆ’ (ವಾರಸುದಾರರ ವರ್ಗಾವಣೆ) ಮಾಡಿಕೊಡುವಂತೆ ಕೋರಿ ಅಸ್ಮಿತಾ ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಯಾವುದೋ ಒಂದು ನೆಪ ಹೇಳುತ್ತಾ ಬಾಲಕಿಯನ್ನು ಕಚೇರಿಗೆ ಅಲೆದಾಡಿಸುತ್ತಿದ್ದರು ಎನ್ನಲಾಗಿದೆ. ಸಿ.ಎ. ಕೆರೆ ಹೋಬಳಿಯ ನಾಡ ಕಚೇರಿಯ ಶಿರಸ್ತೇದಾರ್ ಶಿವಲಿಂಗಯ್ಯ ಅವರು ಈ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಅಸ್ಮಿತಾ ಗಂಭೀರವಾಗಿ ಆರೋಪಿಸಿದ್ದಾಳೆ.

ಅಧಿಕಾರಿಗಳ ವಿಳಂಬ ನೀತಿಯಿಂದ ನೊಂದ ಬಾಲಕಿ, ಬುಧವಾರ ನಡೆದ ಲೋಕಾಯುಕ್ತ ಸಾರ್ವಜನಿಕ ಅಹವಾಲು ಸಭೆಯಲ್ಲಿ ಹಾಜರಾಗಿ ಶಿರಸ್ತೇದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಲಿಖಿತ ದೂರು ನೀಡಿದ್ದಾಳೆ. ಅನಾಥ ಬಾಲಕಿಯೊಬ್ಬಳಿಗೆ ನ್ಯಾಯ ಕೊಡಿಸುವ ಬದಲು ಆಕೆಯನ್ನು ಸತಾಯಿಸುತ್ತಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ, ಬಾಲಕಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !