ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಮಠದ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಪೊಲೀಸರು ಶ್ರೀಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ವಚನಾನಂದ ಶ್ರೀಗಳನ್ನು ಸುಮಾರು ಐದು ಗಂಟೆಗಳ ಕಾಲ ಪ್ರಶ್ನಿಸಿದ್ದಾರೆ. ಮಠದ ಹಾಸ್ಟೆಲ್ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಖಾಸಗಿ ಅಂಗ ಸ್ಪರ್ಶ ಸೇರಿದಂತೆ ದೂರಿನಲ್ಲಿ ಉಲ್ಲೇಖವಾದ ಹಲವು ಆರೋಪಗಳ ಬಗ್ಗೆ ವಿವರವಾಗಿ ಮಾಹಿತಿ ಸಂಗ್ರಹಿಸಲಾಗಿದೆ. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ.
ವಿಚಾರಣೆಗೆ ಮೊದಲು ಮಾತನಾಡಿದ ಸ್ವಾಮೀಜಿ, “ಸತ್ಯವೇ ಗೆಲ್ಲಲಿದೆ, ಕಾಲವೇ ಎಲ್ಲಕ್ಕೂ ಉತ್ತರ ನೀಡಲಿದೆ” ಎಂದು ಪ್ರತಿಕ್ರಿಯಿಸಿದರು. ಮತ್ತೊಂದೆಡೆ, ಇದು ಟ್ರಸ್ಟಿಗಳ ಸಂಚು ಎಂದು ಶ್ರೀಗಳ ಬೆಂಬಲಿಗರು ಆರೋಪಿಸಿದ್ದಾರೆ.
ಇದನ್ನೂ ಓದಿ:
ಈ ಪ್ರಕರಣದಲ್ಲಿ ಸಂತ್ರಸ್ತ ಬಾಲಕನ ತಾಯಿ ನೀಡಿದ ದೂರಿನ ಆಧಾರದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಘಟನೆ ಹರಿಹರ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ತನಿಖೆಯನ್ನು ಅಲ್ಲಿನ ಪೊಲೀಸರಿಗೆ ವರ್ಗಾಯಿಸಲಾಗಿದೆ.
ಇದೇ ವೇಳೆ ವಚನಾನಂದ ಶ್ರೀಗಳಿಗೆ ಈಗಾಗಲೇ ನ್ಯಾಯಾಲಯದಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ದೊರೆತಿದೆ. ತನಿಖೆಗೆ ಸಹಕರಿಸಬೇಕು, ಸಾಕ್ಷಿಗಳಿಗೆ ಒತ್ತಡ ಹಾಕಬಾರದು ಹಾಗೂ ನ್ಯಾಯಾಲಯದ ಅನುಮತಿಯಿಲ್ಲದೆ ಪ್ರದೇಶ ಬಿಟ್ಟು ಹೋಗಬಾರದು ಎಂದು ಕೋರ್ಟ್ ಕಟ್ಟುನಿಟ್ಟಿನ ಷರತ್ತು ವಿಧಿಸಿದೆ.



