ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ್ ಗ್ರಾಮದಲ್ಲಿ ಮಧ್ಯಾಹ್ನ ಭಾರೀ ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯ ಆರ್ಭಟ ಕಂಡುಬಂದಿದೆ. ಏಕಾಏಕಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
ಮಳೆಗೆ ಜೊತೆಯಾದ ಬಿರುಗಾಳಿಯ ಪರಿಣಾಮ ಮದುವೆ ಸಮಾರಂಭ ನಡೆಯುತ್ತಿದ್ದ ಕಲ್ಯಾಣ ಮಂಟಪದ ಮೇಲ್ಚಾವಣಿ ಹಾರಿ ಹೋಗಿದ್ದು, ಮದುವೆಗೆ ಆಗಮಿಸಿದ್ದ ಅತಿಥಿಗಳು ಆತಂಕಕ್ಕೊಳಗಾಗಿ ಸುರಕ್ಷಿತ ಸ್ಥಳಗಳಿಗೆ ಓಡಿಹೋದರು. ಘಟನೆಯ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಇನ್ನೊಂದೆಡೆ, ಗಾಳಿಯ ತೀವ್ರತೆಗೆ ಹೆದ್ದಾರಿ ಪಕ್ಕದಲ್ಲಿದ್ದ ಬೃಹತ್ ಮರಗಳು ಧರೆಗುರುಳಿದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮರಗಳು ರಸ್ತೆ ಮಧ್ಯೆ ಬಿದ್ದಿದ್ದರಿಂದ ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ರಸ್ತೆ ಮೇಲಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಭಾರೀ ಮಳೆ ಹಾಗೂ ಗಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.



