ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಬುಧವಾರ 20 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಈ ಪೈಕಿ 11 ಮಂದಿ 33 ಲಕ್ಷ ರೂ. ಇನಾಮು ಹೊಂದಿದ್ದರು.
ಶರಣಾದ 20 ನಕ್ಸಲರ ಪೈಕಿ 9 ಮಹಿಳೆಯರು ಸೇರಿದ್ದಾರೆ. ಇವರೆಲ್ಲ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಬೆಟಾಲಿಯನ್ ನಂ. 1 ಕೇಡರ್‌ಗೆ ಸೇರಿದವರು.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್, ʼಟೊಳ್ಳು ಮಾವೋವಾದಿ ಸಿದ್ಧಾಂತ, ಮುಗ್ಧ ಬುಡಕಟ್ಟು ಜನಾಂಗದವರ ಮೇಲೆ ಕಾರ್ಯಕರ್ತರು ನಡೆಸಿದ ದೌರ್ಜನ್ಯ ಮತ್ತು ನಿಷೇಧಿತ ಸಂಘಟನೆಯಲ್ಲಿ ಹೆಚ್ಚುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ನಿರಾಶೆಗೊಂಡ ಅವರು ಹಿರಿಯ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆʼ ಎಂದು ತಿಳಿಸಿದ್ದಾರೆ.
ಶರಣಾದ ನಕ್ಸಲರು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸುವ ಗುರಿ ಹೊಂದಿರುವ ರಾಜ್ಯ ಸರ್ಕಾರದ ನಿಯದ್ ನೆಲ್ಲನಾರ್, ಹೊಸ ಶರಣಾಗತಿ ಮತ್ತು ಪುನರ್ವಸತಿ ಯೋಜನೆಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪಿಎಲ್‌ಜಿಎ ಬೆಟಾಲಿಯನ್ ನಂ.1ರ ಸದಸ್ಯೆ ಶರ್ಮಿಳಾ ಅಲಿಯಾಸ್ ಉಯಿಕಾ ಭೀಮೆ (25) ಮತ್ತು ಮಾವೋವಾದಿಗಳ ಪಶ್ಚಿಮ ಬಸ್ತಾರ್ ವಿಭಾಗದ ಸದಸ್ಯೆ ತಾತಿ ಕೋಸಿ ಅಲಿಯಾಸ್ ಪರ್ಮಿಳಾ (20)ಗೆ ತಲಾ 8 ಲಕ್ಷ ರೂ. ಇನಾಮು ಘೋಷಿಸಲಾಗಿತ್ತುʼ ಎಂದು ವಿವರಿಸಿದ್ದಾರೆ.
ಪ್ರದೇಶ ಸಮಿತಿ ಸದಸ್ಯರಾಗಿರುವ ಮುಚಕಿ ಹಿಡ್ಮಾ (54) ಎಂಬ ಮತ್ತೊಬ್ಬ ಕೇಡರ್ 5 ಲಕ್ಷ ರೂ. ಇನಾಮು ಹೊಂದಿದ್ದಳು. ಇತರ ನಾಲ್ವರು ಕೇಡರ್‌ಗಳನ್ನು ಹುಡುಕಿಕೊಟ್ಟರೆ ತಲಾ 4 ಲಕ್ಷ ರೂ. ಬಹುಮಾನ ಮತ್ತು ಇತರರರಿಗೆ ತಲಾ 1 ಲಕ್ಷ ರೂ. ನಗದು ಘೋಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಶರಣಾದ ಎಲ್ಲ 20 ನಕ್ಸಲರಿಗೆ ತಲಾ 50,000 ರೂ. ನೆರವು ನೀಡಲಾಯಿತು ಮತ್ತು ಸರ್ಕಾರದ ನಿಯಮದ ಪ್ರಕಾರ ಅವರಿಗೆ ಮತ್ತಷ್ಟು ಸಹಾಯಹಸ್ತ ಚಾಚಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪುನರ್ವಸತಿ ಯೋಜನೆಯಡಿ ಶರಣಾಗತರಿಗೆ ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಜೀವನ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.