ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನೆರೆಯ ಆಂಧ್ರಪ್ರದೇಶದಲ್ಲೂ ಇದರ ಸಂಚಲನ ಶುರುವಾಗಿದೆ. ತಮಿಳುನಾಡಿನಲ್ಲಿ ವಿಜಯ್‌ಗೆ ಇರುವಂತೆಯೇ ಆಂಧ್ರ ಹಾಗೂ ತೆಲಂಗಾಣದಲ್ಲಿ ಭಾರಿ ಜನಪ್ರಿಯತೆ ಹೊಂದಿರುವ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಕೂಡ ಸಿಎಂ ಆಗಬೇಕೆಂಬ ಒತ್ತಡ ಅಭಿಮಾನಿಗಳಿಂದ ಕೇಳಿಬರುತ್ತಿದೆ. ಈ ಕುರಿತು ಈಗ ಸ್ವತಃ ಪವನ್ ಕಲ್ಯಾಣ್ ಅವರೇ ಪ್ರತಿಕ್ರಿಯಿಸಿದ್ದಾರೆ.
ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪವನ್ ಕಲ್ಯಾಣ್, ದಳಪತಿ ವಿಜಯ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತಮ್ಮ ಮೇಲಿರುವ ಒತ್ತಡದ ಬಗ್ಗೆ ಮಾತನಾಡಿದರು. “ನೆರೆಯ ರಾಜ್ಯದಲ್ಲಿ ನಟರೊಬ್ಬರು ಹೊಸ ಪಕ್ಷ ಕಟ್ಟಿ ಸಿಎಂ ಆಗಿರುವುದನ್ನು ನೋಡಿ, ನಾನು ಕೂಡ ಆಂಧ್ರಪ್ರದೇಶದಲ್ಲಿ ಅದೇ ರೀತಿ ಮಾಡಬೇಕು ಎಂದು ಅನೇಕರು ನನಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ತೆಲುಗಿನ ಪ್ರಸಿದ್ಧ ಗಾದೆಯೊಂದನ್ನು ನೆನಪಿಸಿದ ಅವರು, “ಇದು ‘ಊರವರ ಮದುವೆಗೆ ಇನ್ನಿಲ್ಲದ ಸಡಗರ’ ಎನ್ನುವಂತಿದೆ. ಬೇರೆಯವರ ಮನೆಯ ಮದುವೆಗೆ ಸಣ್ಣ ಮಕ್ಕಳು ಉತ್ಸಾಹದಿಂದ ಓಡಾಡುವ ಸನ್ನಿವೇಶದಂತೆ ಇದು ಕಾಣುತ್ತಿದೆ. ಆದರೆ ಆಂಧ್ರಪ್ರದೇಶದ ರಾಜಕೀಯ ಪರಿಸ್ಥಿತಿಯೇ ಬೇರೆ. ದಯವಿಟ್ಟು ನನ್ನನ್ನು ಅವರೊಂದಿಗೆ ಹೋಲಿಕೆ ಮಾಡಬೇಡಿ” ಎಂದು ವಿನಂತಿಸಿದರು.
ತಮ್ಮ ಹಳೆಯ ಚುನಾವಣಾ ಹಿನ್ನಡೆಯನ್ನು ನೆನಪಿಸಿಕೊಂಡ ಪವನ್, “ಜನರು ಹೇಳಿದಂತೆಯೇ ನಾನು 2019ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆದರೆ ಆಗ ಜನರೇನು ಮಾಡಿದರು? ಅಂತಿಮವಾಗಿ ನನ್ನ ಜೊತೆ ಮಂತ್ರಿಗಳು ಕೂಡ ನಿಲ್ಲಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.



