July 5, 2026
Sunday, July 5, 2026
spot_img

ಗುಲಾಮನಾಗಿದ್ದೆ, ಇನ್ಮುಂದೆ ಸುಮ್ಮನಿರಲ್ಲ: ಪತ್ನಿ ಆರತಿ ವಿರುದ್ಧ ಜಯಂ ರವಿ ಗುಡುಗು

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ಸದ್ಯ ತಮ್ಮ ವೃತ್ತಿಜೀವನಕ್ಕಿಂತ ವೈಯಕ್ತಿಕ ಬದುಕಿನ ಏರುಪೇರುಗಳಿಂದಲೇ ಸುದ್ದಿಯಲ್ಲಿದ್ದಾರೆ. ಪತ್ನಿ ಆರತಿ ಅವರಿಂದ ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ನಟ, ಇತ್ತೀಚೆಗೆ ಚೆನ್ನೈನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅತ್ಯಂತ ಭಾವುಕರಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಮತ್ತು ಬೇಸರ ಹೊರಹಾಕಿದ ಜಯಂ ರವಿ, “ನನಗೆ ಅಧಿಕೃತವಾಗಿ ಕೋರ್ಟ್‌ನಿಂದ ವಿಚ್ಛೇದನ ಸಿಗುವವರೆಗೆ ನಾನು ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಕಳೆದ 14 ವರ್ಷಗಳಿಂದ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೆ. ಆದರೆ ಇನ್ನು ಮುಂದೆ ಮೌನವಾಗಿರಲ್ಲ. ನನಗೆ ನಡೆದಿರುವ ಅವಮಾನ ಹಾಗೂ ಹಾನಿಯಾಗಿರುವ ನನ್ನ ವೈಯಕ್ತಿಕ ಜೀವನವನ್ನು ಮೊದಲು ಸರಿಪಡಿಸಿಕೊಳ್ಳಬೇಕಿದೆ” ಎಂದು ಘೋಷಿಸಿದ್ದಾರೆ.

ತಮ್ಮ ವೈವಾಹಿಕ ಜೀವನದ ಕಹಿ ದಿನಗಳನ್ನು ನೆನೆದ ನಟ, “ನನ್ನನ್ನು ಮನೆಯಲ್ಲಿ ಒಬ್ಬ ಗುಲಾಮನಂತೆ ನಡೆಸಿಕೊಳ್ಳಲಾಗಿತ್ತು. ಈಗ ನನ್ನ ಸ್ವಂತ ಮಕ್ಕಳನ್ನು ನೋಡಲು ಬಿಡುತ್ತಿಲ್ಲ, ಅವರಿಗೆ ಬಾಡಿಗಾರ್ಡ್ ರಕ್ಷಣೆ ನೀಡಿ ನನ್ನಿಂದ ದೂರ ಇಡಲಾಗುತ್ತಿದೆ. ಆದರೆ ಮಕ್ಕಳ ಮೇಲಿನ ಪ್ರೀತಿಯಿಂದಾಗಿ ನಾನು ವರ್ಷಕ್ಕೆ 90 ಲಕ್ಷ ರೂಪಾಯಿ ಶಾಲಾ ಫೀಸ್ ಕಟ್ಟುತ್ತಿದ್ದೇನೆ” ಎಂದು ಕಿಡಿಕಾರಿದ್ದಾರೆ. ಆನ್‌ಲೈನ್‌ನಲ್ಲಿ ತಮ್ಮ ವಿರುದ್ಧ ಹರಡುತ್ತಿರುವ ಅಪಪ್ರಚಾರಗಳ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿಯೂ ಅವರು ಎಚ್ಚರಿಸಿದ್ದಾರೆ.

ಇದೇ ವೇಳೆ ಜಯಂ ರವಿ ಅವರ ಆಪ್ತ ಗೆಳತಿ ಎನ್ನಲಾದ ಗಾಯಕಿ ಕೆನೀಶಾ ಫ್ರಾನ್ಸಿಸ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚೆನ್ನೈ ತೊರೆಯುವ ಮುನ್ನ ಕನ್ನಡಿಯ ಮುಂದೆ ನಿಂತು ಸೆಲ್ಫಿ ಹಂಚಿಕೊಂಡಿರುವ ಕೆನೀಶಾ, “ಬೈ ಬೈ ಚೆನ್ನೈ, ನಿನ್ನನ್ನು ಪ್ರೀತಿಸುತ್ತೇನೆ. ಅಂದಹಾಗೆ, ಅವನು ಈಗ ಸಂಪೂರ್ಣವಾಗಿ ನಿಮ್ಮವನೇ” ಎಂದು ಬರೆದುಕೊಂಡಿದ್ದಾರೆ. ಇದು ಜಯಂ ರವಿ ಹಾಗೂ ಕೆನೀಶಾ ನಡುವಿನ ಬ್ರೇಕಪ್‌ ಅನ್ನು ಸೂಚಿಸುತ್ತದೆ ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ. ಈ ಬೆನ್ನಲ್ಲೇ ರವಿ ಸುದ್ದಿಗೋಷ್ಠಿ ನಡೆಸಿ, ಆನ್‌ಲೈನ್ ನಿಂದನೆಯಿಂದಾಗಿ ಈಗಾಗಲೇ ಒಬ್ಬ ಮಹಿಳೆಯ ಜೀವನ ಹಾಳಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !