May 17, 2026
Sunday, May 17, 2026
spot_img

ಸಿಬಿಎಸ್‌ಇ ವಿದ್ಯಾರ್ಥಿಗಳೇ ಗಮನಿಸಿ: 9ನೇ ತರಗತಿಯಿಂದ ಮೂರು ಭಾಷೆಗಳ ಕಲಿಕೆ ಕಡ್ಡಾಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ತನ್ನ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಜುಲೈ 1 ರಿಂದ 9ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಮೂರು ಭಾಷೆಗಳ ಕಲಿಕೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಮಾರ್ಗಸೂಚಿಯ ಭಾಗವಾಗಿ, ವಿದ್ಯಾರ್ಥಿಗಳು ಇನ್ಮುಂದೆ R1, R2 ಮತ್ತು R3 ಎಂದು ಕರೆಯಲಾಗುವ ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯಬೇಕು. ಮುಖ್ಯವಾಗಿ ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾಷೆಗಳು ಭಾರತೀಯ ಮೂಲದ ಸ್ಥಳೀಯ ಭಾಷೆಗಳಾಗಿರಬೇಕು ಎಂದು ಮಂಡಳಿ ಸ್ಪಷ್ಟಪಡಿಸಿದೆ.

10ನೇ ತರಗತಿಯಲ್ಲಿ ಮೂರನೇ ಭಾಷೆಗೆ ಪರೀಕ್ಷೆ ಇಲ್ಲ
ಇನ್ನು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಿಬಿಎಸ್‌ಇ ವಿನಾಯಿತಿ ನೀಡಿದ್ದು, 10ನೇ ತರಗತಿಯಲ್ಲಿ ಮೂರನೇ ಭಾಷೆಗೆ (R3) ಯಾವುದೇ ಅಧಿಕೃತ ಬೋರ್ಡ್ ಪರೀಕ್ಷೆಗಳು ಇರುವುದಿಲ್ಲ. ಶಾಲೆಗಳ ಮಟ್ಟದಲ್ಲೇ ಆಂತರಿಕ ಮೌಲ್ಯಮಾಪನ ನಡೆಸಲಾಗುವುದು ಮತ್ತು ವಿದ್ಯಾರ್ಥಿಗಳ ಫಲಿತಾಂಶ ಅವರ ಸಿಬಿಎಸ್‌ಇ ಪ್ರಮಾಣಪತ್ರದಲ್ಲಿ ದಾಖಲಿಸಲಾಗುವುದು ಎಂದುತಿಳಿಸಲಾಗಿದೆ.

ಮೂರನೇ ಭಾಷೆಯ ಕಾರಣದಿಂದಾಗಿ ಯಾವುದೇ ವಿದ್ಯಾರ್ಥಿಯು 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹಾಜರಾಗುವುದರಿಂದ ವಂಚಿತರಾಗುವುದಿಲ್ಲ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ.

ವಿದೇಶಿ ಭಾಷೆ ಕಲಿಯಲು ಹೊಸ ನಿಯಮ
ಇದೇ ವೇಳೆ ಯಾವುದೇ ವಿದ್ಯಾರ್ಥಿಯು ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಬಯಸಿದರೆ, ಮೊದಲು ಎರಡು ಭಾರತೀಯ ಭಾಷೆಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು. ಬಳಿಕ ವಿದೇಶಿ ಭಾಷೆಯನ್ನು ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಇದೇ ವೇಳೆ ವಿಶೇಷಚೇತನರ ಹಕ್ಕುಗಳ ಕಾಯ್ದೆ 2016 ರ ಅಡಿಯಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗೆ ಭಾಷಾ ಕಲಿಕೆಯಲ್ಲಿ ನೀಡಲಾಗುವ ವಿನಾಯಿತಿಗಳು ಮುಂದುವರಿಯಲಿವೆ. ವಿದೇಶಗಳಿಂದ ಭಾರತಕ್ಕೆ ಮರಳುವ ವಿದೇಶಿ ವಿದ್ಯಾರ್ಥಿಗಳಿಗೂ ಎರಡು ಭಾರತೀಯ ಭಾಷೆಗಳನ್ನು ಕಲಿಯುವ ಕಡ್ಡಾಯ ನಿಯಮದಿಂದ ವಿನಾಯಿತಿ ನೀಡಲಾಗುವುದು ಎಂದು ಸಿಬಿಎಸ್‌ಇ ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !