ಹೊಸ ದಿಗಂತ ವರದಿ, ಮಂಗಳೂರು:
ಮಂಗಳೂರಿನ ತಣ್ಣೀರುಬಾವಿಯ ಬ್ಲೂ ಬೇ ಇಕೋ ಬೀಚ್‌ನಲ್ಲಿ ಮೇ 29 ರಿಂದ 31ರವರೆಗೆ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದ್ದಾರೆ.
ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಭಾಗಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಚಿ ನಗೋಯಾ ಏಷ್ಯನ್ ಗೇಮ್ಸ್ 2026 ನಲ್ಲಿ ಸರ್ಫಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಚೊಚ್ಚಲ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಸರ್ಫಿಂಗ್ ಮಹತ್ವ ಪೂರ್ಣವೆನಿಸಿದೆ. ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದರು.
ದೇಶದಲ್ಲಿ ಸರ್ಫಿಂಗ್ ಹಾಗೂ ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಕ್ರೀಡೆಗಳ ಆಡಳಿತ ಸಂಸ್ಥೆಯಾದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯುವ ಈ ಸ್ಪರ್ಧೆಯನ್ನು ನವ ಮಂಗಳೂರು ಬಂದರು ಪ್ರಾಧಿಕಾರ ಸತತ ಮೂರನೇ ವರ್ಷವೂ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್, ಶೀರ್ಷಿಕೆ ಪ್ರಾಯೋಜಕರಾಗಿ ಬೆಂಬಲಿಸುತ್ತಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಸಹ ಕಾರ್ಯಕ್ರಮಕ್ಕೆ ಕೈಜೋಡಿಸಿವೆ ಎಂದು ಅವರು ಹೇಳಿದರು.
ಯುವ ಪ್ರತಿಭೆಗಳಿಗೆ ಅವಕಾಶ
ಸರ್ಫಿಂಗ್ ಹಾಗೂ ಕರಾವಳಿ ಕ್ರೀಡೆಗಳಿಗೆ ಕರ್ನಾಟಕವು ದೇಶದ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ. ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆ ಮತ್ತು ಪ್ರವಾಸೋದ್ಯಮ ಎರಡನ್ನೂ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಕರಾವಳಿಯ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವುದರ ಜೊತೆಗೆ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಒತ್ತು ನೀಡಲಾಗಿದೆ ಎಂದವರು ತಿಳಿಸಿದರು.
2017 ರಿಂದ ಮಂಗಳೂರಿನಲ್ಲಿ ಆಯೋಜನೆ
ಮೂರು ದಿನಗಳ ಮುಕ್ತ ಸರ್ಫಿಂಗ್ ಸ್ಪರ್ಧೆ ನಡೆಯಲಿದೆ. 2017ರಿಂದ ಮಂಗಳೂರಿನಲ್ಲಿ ಸರ್ಫಿಂಗ್ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ಸ್ಪರ್ಧೆಯ ಚಾಂಪಿಯನ್‌ಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ರೋಮಾಂಚಕ ಕ್ಷಣಗಳಿಗೆ ಸಾಕ್ಷಿ
ಕರ್ನಾಟಕ ಸರಕಾರದ ಬೆಂಬಲದೊಂದಿಗೆ ಸರ್ಫಿಂಗ್ ಸ್ಪರ್ಧೆಯನ್ನು ಸರ್ಫಿಂಗ್ ಸ್ವಾಮಿ ಫೌಂಡೇಶನ್‌ನ ಧನಂಜಯ್ ಶೆಟ್ಟಿ ಮಾತನಾಡಿ, ಕಳೆದ ಕೆಲ ವರ್ಷಗಳಲ್ಲಿ ಸರ್ಫರ್‌ಗಳ ಬೆಳವಣಿಗೆ ಆಶಾಯದಾಕವಾಗಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ದೇಶದ ಅಗ್ರ ಸರ್ಫರ್‌ಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸರ್ಫಿಂಗ್ ಕ್ಷೇತ್ರದ ರೋಮಾಂಚಕ ಕ್ಷಣಗಳಿಗೆ ಮಂಗಳೂರಿನ ಕಡಲ ಕಿನಾರೆ ಸಾಕ್ಷಿಯಾಗಲಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಲೋಗೋವನ್ನು ಅನಾವರಣಗೊಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಸರ್ಫಿಂಗ್ ಅಸೋಸಿಯೇಶ್‌ನ ಶ್ಯಾಮ್, ಧ್ರುವ, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್, ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.



