August 20, 2026
Thursday, August 20, 2026
spot_img

ಡಿಎಂಕೆ ಆಕ್ರೋಶಕ್ಕೆ ಮಣಿದ ಸಿಎಂ ವಿಜಯ್: ಕೇವಲ 6 ಗಂಟೆಯಲ್ಲೇ ಮುಕ್ತಾಯವಾಗಿದ್ದ ಟೆಂಡರ್ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ಹಿನ್ನಡೆಯಾಗಿದೆ. ತೂತುಕುಡಿ ಜಿಲ್ಲೆಯ ಹಳ್ಳಿಯೊಂದರಲ್ಲಿ 3,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ನೀಡಲಾಗಿದ್ದ 16.83 ಲಕ್ಷ ರೂ. ಮೌಲ್ಯದ ಸರ್ಕಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷ ಡಿಎಂಕೆ ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಸರ್ಕಾರ ಈ ಟೆಂಡರ್ ಅನ್ನು ಅಧಿಕೃತವಾಗಿ ರದ್ದುಗೊಳಿಸಿದೆ.

ವಿವಾದಕ್ಕೆ ಕಾರಣವೇನು?

ನಿಯಮಾವಳಿಗಳ ಪ್ರಕಾರ ಈ ಟೆಂಡರ್‌ನ ಸಂಪೂರ್ಣ ವಿವರಗಳು ಮೇ 13ರಿಂದಲೇ ಗುತ್ತಿಗೆದಾರರಿಗೆ ಲಭ್ಯವಿರಬೇಕಾಗಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ, ಮೇ 18ರಂದು ಬೆಳಗ್ಗೆ 9 ಗಂಟೆಗೆ ಟೆಂಡರ್ ಓಪನ್ ಮಾಡಲಾಗಿತ್ತು. ಅಚ್ಚರಿಯ ವಿಷಯವೆಂದರೆ, ಕೇವಲ 6 ಗಂಟೆಗಳ ಕಾಲಾವಕಾಶ ನೀಡಿ ಅಂದೇ ಮಧ್ಯಾಹ್ನ 3 ಗಂಟೆಗೆ ಟೆಂಡರ್ ಪ್ರಕ್ರಿಯೆಯನ್ನು ಕ್ಲೋಸ್ ಮಾಡಲಾಗಿತ್ತು. ಇದಾದ ಮರುದಿನವೇ (ಮೇ 19) ಮಧ್ಯಾಹ್ನ 4 ಗಂಟೆಗೆ ತರಾತುರಿಯಲ್ಲಿ ತಮಗಿಷ್ಟ ಬಂದ ಗುತ್ತಿಗೆದಾರರೊಬ್ಬರಿಗೆ ಟೆಂಡರ್ ವಹಿಸಿಕೊಡಲಾಗಿತ್ತು.

ಇಬ್ಬರು ಅಧಿಕಾರಿಗಳ ಅಮಾನತು

ಕೇವಲ ಆರೇ ಗಂಟೆಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ನಿರ್ದಿಷ್ಟ ವ್ಯಕ್ತಿಗೆ ಲಾಭ ಮಾಡಿಕೊಡಲು ಅಕ್ರಮ ಎಸಗಲಾಗಿದೆ ಎಂದು ಡಿಎಂಕೆ ತೀವ್ರ ವಾಗ್ದಾಳಿ ನಡೆಸಿತ್ತು. ಸಾರ್ವಜನಿಕ ವಲಯದಲ್ಲೂ ಸರ್ಕಾರದ ಪಾರದರ್ಶಕತೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ವಿಜಯ್ ಸರ್ಕಾರ, ತಕ್ಷಣವೇ ಟೆಂಡರ್ ರದ್ದು ಮಾಡಿದೆ. ಅಲ್ಲದೆ, ಈ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿರುವ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ತನಿಖೆ ಮುಗಿಯುವವರೆಗೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !