ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನಸಿಕ ಒತ್ತಡ ಮತ್ತು ಆತಂಕ ಪ್ರತಿಯೊಬ್ಬರ ಜೀವನದ ಸಾಮಾನ್ಯ ಭಾಗವಾಗಿಬಿಟ್ಟಿದೆ. ಹಣ, ಐಷಾರಾಮಿ ಜೀವನವಿದ್ದರೂ ಮನಸ್ಸಿಗೆ ನೆಮ್ಮದಿ ಇಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಆಧ್ಯಾತ್ಮ ಎನ್ನುವುದು ಕೇವಲ ಧಾರ್ಮಿಕ ನಂಬಿಕೆಯಾಗಿ ಉಳಿಯದೆ, ಮಾನಸಿಕ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.
ಬೆಳಗಿನಿಂದ ರಾತ್ರಿಯವರೆಗೆ ಓಟ, ಕೆಲಸದ ಒತ್ತಡ, ಭವಿಷ್ಯದ ಚಿಂತೆ—ಇವು ಇಂದಿನ ಆಧುನಿಕ ಮಾನವನನ್ನು ಸದಾ ಒತ್ತಡದಲ್ಲಿ ಇಡುತ್ತವೆ. ಹೊರಗಿನ ಪ್ರಪಂಚವನ್ನು ನಿಯಂತ್ರಿಸುವುದು ನಮಗೆ ಸಾಧ್ಯವಿಲ್ಲದಿದ್ದರೂ, ನಮ್ಮ ಒಳಗಿನ ಮನಸ್ಸನ್ನು ನಿಯಂತ್ರಿಸಲು ಆಧ್ಯಾತ್ಮ ನಮಗೆ ದಾರಿ ತೋರಿಸುತ್ತದೆ. ಆಧ್ಯಾತ್ಮಿಕ ಚಿಂತನೆಗಳು ನಮ್ಮ ಮನಸ್ಸನ್ನು ಶಾಂತಗೊಳಿಸಿ, ಒತ್ತಡವನ್ನು ಹೇಗೆ ದೂರಮಾಡುತ್ತವೆ ಎಂಬುದರ ಬಗ್ಗೆ ಇಲ್ಲಿದೆ.
ಆಧ್ಯಾತ್ಮ ಮಾನಸಿಕ ಒತ್ತಡವನ್ನು ಹೇಗೆ ಕಡಿಮೆ ಮಾಡುತ್ತದೆ?
ಜನರು ಹೆಚ್ಚಾಗಿ ಹಿಂದೆ ಮಾಡಿದ ತಪ್ಪುಗಳ ಬಗ್ಗೆ ಅಥವಾ ಮಂದಿನ ಭವಿಷ್ಯದ ಚಿಂತೆಯಲ್ಲೇ ಬದುಕುತ್ತಿರುತ್ತಾರೆ. ಆಧ್ಯಾತ್ಮವು ಈ ಕ್ಷಣದಲ್ಲಿ ಬದುಕುವುದನ್ನು ಕಲಿಸುತ್ತದೆ. ಯಾವಾಗ ಮನಸ್ಸು ಪ್ರಸ್ತುತ ಕ್ಷಣದಲ್ಲಿ ಇರುತ್ತದೆಯೋ, ಆಗ ಅರ್ಧದಷ್ಟು ಒತ್ತಡ ತಾನಾಗಿಯೇ ಮಾಯವಾಗುತ್ತದೆ.
ಜೀವನದಲ್ಲಿ ಬರುವ ಕಷ್ಟ-ಸುಖಗಳು ತಾತ್ಕಾಲಿಕ ಎಂಬ ಅರಿವನ್ನು ಆಧ್ಯಾತ್ಮ ನೀಡುತ್ತದೆ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮಾನಸಿಕ ಪಕ್ವತೆ ಇದರಿಂದ ಬರುತ್ತದೆ.
ಅತಿಯಾದ ಯೋಚನೆ ಮತ್ತು ನಕಾರಾತ್ಮಕ ಆಲೋಚನೆಗಳು ಒತ್ತಡಕ್ಕೆ ಮುಖ್ಯ ಕಾರಣ. ಆಧ್ಯಾತ್ಮಿಕ ಚಿಂತನೆಗಳು ಮನಸ್ಸಿನಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಿ, ಆತಂಕವನ್ನು ದೂರಮಾಡುತ್ತವೆ.
ಒತ್ತಡ ಮುಕ್ತ ಜೀವನಕ್ಕಾಗಿ ಸರಳ ಆಧ್ಯಾತ್ಮಿಕ ಅಭ್ಯಾಸಗಳು:
ಮುಂಜಾನೆ ಅಥವಾ ರಾತ್ರಿ ಮಲಗುವ ಮುನ್ನ 10 ನಿಮಿಷ ಕಣ್ಣು ಮುಚ್ಚಿ ಪ್ರಶಾಂತವಾಗಿ ಕುಳಿತುಕೊಂಡು ಉಸಿರಾಟದ ಕಡೆಗೆ ಗಮನ ಹರಿಸಬೇಕು. ಇದು ಮೆದುಳನ್ನು ಶಾಂತಗೊಳಿಸಿ, ಒತ್ತಡದ ಹಾರ್ಮೋನ್‌ಗಳನ್ನು ಕಡಿಮೆ ಮಾಡುತ್ತದೆ.
“ನನ್ನ ಹತ್ತಿರ ಅದಿಲ್ಲ, ಇದಿಲ್ಲ” ಎಂದು ಕೊರಗುವುದನ್ನು ಬಿಟ್ಟು, ಭಗವಂತ ಅಥವಾ ಪ್ರಕೃತಿ ನೀಡಿರುವ ಒಳ್ಳೆಯ ವಿಷಯಗಳಿಗೆ ದಿನದ ಕೊನೆಯಲ್ಲಿ ಧನ್ಯವಾದ ಹೇಳುವುದನ್ನು ರೂಢಿಸಿಕೊಳ್ಳಬೇಕು. ಇದು ತೃಪ್ತಿಯ ಭಾವವನ್ನು ತರುತ್ತದೆ.
ದಿನದಲ್ಲಿ ಕೇವಲ 15 ನಿಮಿಷಗಳ ಕಾಲ ಮೊಬೈಲ್, ಟಿವಿ ಎಲ್ಲವನ್ನೂ ಬದಿಗಿಟ್ಟು ಸಂಪೂರ್ಣ ಮೌನವಾಗಿದ್ದರೆ. ಆಗ ಹೊರಗಿನ ಗದ್ದಲ ನಿಂತಾಗ ಒಳಗಿನ ಆತ್ಮದ ಧ್ವನಿ ಕೇಳಿಸುತ್ತದೆ.
ಒಳ್ಳೆಯ ವಿಚಾರಗಳನ್ನು ಒಳಗೊಂಡ ಪುಸ್ತಕಗಳನ್ನು ಓದುವುದು ಅಥವಾ ಪ್ರವಚನಗಳನ್ನು ಕೇಳುವುದರಿಂದ ಮನಸ್ಸಿನ ಗೊಂದಲಗಳು ಪರಿಹಾರವಾಗುತ್ತವೆ.



