ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (AQI) ಸ್ಥಿರವಾಗಿದ್ದು, ಸಾರ್ವಜನಿಕರು ನಿರಾಳವಾಗಿ ಉಸಿರಾಡುವಂತ ವಾತಾವರಣವಿದೆ. ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ವಾಯು ಮಾಲಿನ್ಯದ ಆರ್ಭಟ ಜೋರಾಗಿದ್ದರೆ, ಗಾರ್ಡನ್ ಸಿಟಿಯಲ್ಲಿ ಮಾತ್ರ ಗಾಳಿಯ ಗುಣಮಟ್ಟ ‘ಉತ್ತಮ’ ಮತ್ತು ‘ಸಮರ್ಪಕ’ ಶ್ರೇಣಿಯಲ್ಲಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ಮಾಡಿದೆ.
ಸದ್ಯ ಸಿಲಿಕಾನ್ ಸಿಟಿಯ ಇಂದಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ 40 ರಿಂದ 65 ರಷ್ಟಿದೆ. ಹೊಂಬೇಗೌಡ ನಗರ, ಜಯನಗರ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತಲಿನ ಹಸಿರು ವಲಯಗಳಲ್ಲಿ ಗಾಳಿ ಅತ್ಯಂತ ಶುದ್ಧವಾಗಿದೆ. ಎಂದಿನಂತೆ ವಿಪರೀತ ವಾಹನ ದಟ್ಟಣೆ ಇರುವ ಸಿಲ್ಕ್ ಬೋರ್ಡ್, ಬಾಪೂಜಿ ನಗರ ಮತ್ತು ಮೆಜೆಸ್ಟಿಕ್ ಭಾಗಗಳಲ್ಲಿ ಪೀಕ್ ಅವರ್ಸ್‌ನಲ್ಲಿ ಮಾಲಿನ್ಯದ ಮಟ್ಟ ‘ಸಾಧಾರಣ’ ವಲಯಕ್ಕೆ ತಲುಪುತ್ತಿದೆ.
ನಗರದ ವಾಯು ಮಾಲಿನ್ಯಕ್ಕೆ ಶೇ. 60 ಕ್ಕಿಂತ ಹೆಚ್ಚು ವಾಹನಗಳ ಹೊಗೆಯೇ ಪ್ರಮುಖ ಕಾರಣವಾಗಿದ್ದು, ಮೆಟ್ರೋ ಮತ್ತು ರಸ್ತೆ ಕಾಮಗಾರಿಗಳ ಧೂಳು ಇದಕ್ಕೆ ಮತ್ತಷ್ಟು ಸಾಥ್ ನೀಡುತ್ತಿದೆ.
ರಾಜ್ಯದ ಒಟ್ಟಾರೆ ಸ್ಥಿತಿ
ಕರಾವಳಿ ಮತ್ತು ಮಲೆನಾಡು ಭಾಗಗಳಾದ ಮಂಗಳೂರು, ಮಡಿಕೇರಿ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಅತ್ಯುತ್ತಮವಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಹೆಚ್ಚಿರುವ ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಮತ್ತು ಬಳ್ಳಾರಿ ಭಾಗಗಳಲ್ಲಿ AQI ಮಟ್ಟ 55 ರಿಂದ 80 ರಷ್ಟಿದ್ದು, ಸಾಧಾರಣ ಶ್ರೇಣಿಯಲ್ಲಿದೆ.



