ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಯುವಕರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಉದ್ಯೋಗದ ಭರವಸೆ ನೀಡಿದ್ದು, ಇಂದು ನಡೆಯಲಿರುವ 19ನೇ ಆವೃತ್ತಿಯ ರೋಜ್‌ಗಾರ್ ಮೇಳದಲ್ಲಿ 51 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಯುವಕರೊಂದಿಗೆ ಸಂವಾದ ನಡೆಸಿ ನೇಮಕಾತಿ ಪತ್ರ ಹಸ್ತಾಂತರಿಸಲಿದ್ದಾರೆ.
42 ನಗರಗಳಲ್ಲಿ ಒಂದೇ ಸಮಯಕ್ಕೆ ಮೇಳ
ಬೆಳಗ್ಗೆ 11 ಗಂಟೆಯಿಂದ ಆರಂಭವಾಗಿದ್ದು, ಈ ಉದ್ಯೋಗ ಮೇಳ ದೇಶದ 42 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:
ಯಾವ ಯಾವ ಇಲಾಖೆಗೆ ನೇಮಕಾತಿ?
ರೈಲ್ವೇ, ಗೃಹ ವ್ಯವಹಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆ, ಉನ್ನತ ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳ ಹುದ್ದೆಗಳಿಗೆ ಯುವಕರನ್ನು ನೇಮಕ ಮಾಡಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಅಭ್ಯರ್ಥಿಗಳು ಇಂದು ಅಧಿಕೃತವಾಗಿ ಸೇವೆಗೆ ಸೇರ್ಪಡೆಯಾಗಲಿದ್ದಾರೆ.
12 ಲಕ್ಷಕ್ಕೂ ಹೆಚ್ಚು ಉದ್ಯೋಗ ಪತ್ರ ವಿತರಣೆ
ಈವರೆಗೆ ನಡೆದ 18 ಉದ್ಯೋಗ ಮೇಳಗಳ ಮೂಲಕ ಸುಮಾರು 12 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಮಾಹಿತಿ ನೀಡಿದೆ. ಯುವಕರ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯೇ ಕೇಂದ್ರ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.



