ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಕ್ರೀಡಾಲೋಕ ತಲೆತಗ್ಗಿಸುವಂತಹ ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ದೇಶದ ಭರವಸೆಯ ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೀಟ್ ಚಿರಾಗ್ ತ್ಯಾಗಿ (25) ಅವರನ್ನು ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿರಾಗ್ ತ್ಯಾಗಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಈ ಅದ್ಭುತ ಪ್ರದರ್ಶನದ ಮೂಲಕ ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ಆಯೋಜನೆಯಾಗಿರುವ ಪ್ರತಿಷ್ಠಿತ ಪ್ಯಾರಾ ಏಷ್ಯನ್ ಗೇಮ್ಸ್‌ಗೂ ಅವರು ಅರ್ಹತೆ ಪಡೆದುಕೊಂಡಿದ್ದರು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು.
ನಿಗೂಢ ನಾಪತ್ತೆ ಮತ್ತು ಶವ ಪತ್ತೆ:
ಬುಧವಾರ ಬೆಳಗ್ಗೆ ಕುಟುಂಬಸ್ಥರೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದ ಚಿರಾಗ್, ಮಧ್ಯಾಹ್ನ 3:30ರಷ್ಟೊತ್ತಿಗೆ ಮನೆಗೆ ಮರಳುವುದಾಗಿ ಹೇಳಿದ್ದರು. ಆದರೆ ಆ ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಕಟುಂಬ ಸದಸ್ಯರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ, ಶನಿವಾರ ಘಾಜಿಯಾಬಾದ್‌ನ ಸಾಯಿ ಕುಂಜ್ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಚಿರಾಗ್ ಅವರ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲೇ ಇದು ಗುಂಡಿನ ದಾಳಿಯಿಂದ ನಡೆದ ಹತ್ಯೆ ಎಂಬುದು ಸ್ಪಷ್ಟವಾಗಿದೆ.
ಕೊಲೆಗೆ ಕಾರಣವಾದ ಹಳೇ ದ್ವೇಷ: ಚಿರಾಗ್ ಮತ್ತು ಕೊಲೆ ಆರೋಪಿ ಯಶ್ ಖಾಟಿಕ್ ಇಬ್ಬರೂ ದೃಷ್ಟಿಹೀನರ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಅಥ್ಲೀಟ್‌ಗಳು. ಹಲವು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದ ಇವರಿಬ್ಬರು ಒಂದೇ ಕೋಣೆಯಲ್ಲಿದ್ದುಕೊಂಡು ತರಬೇತಿ ಪಡೆಯುತ್ತಿದ್ದರು. ಆದರೆ, ಯಶ್ ಖಾಟಿಕ್ ಸಲ್ಲಿಕೆ ಮಾಡಿದ್ದ ಕ್ರೀಡಾ ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಚಿರಾಗ್ ಈ ಹಿಂದೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಯಶ್ ಸ್ಪರ್ಧೆಯಿಂದ ಅನರ್ಹಗೊಂಡಿದ್ದ ಎನ್ನಲಾಗಿದೆ.
ಸ್ನೇಹಿತನ ಬೆನ್ನಿಗೆ ಗುಂಡಿಟ್ಟ ಪಾಪಿ:
ತನ್ನ ಕ್ರೀಡಾ ಜೀವನ ಹಾಳಾಗಲು ಚಿರಾಗ್ ಕಾರಣ ಎಂದು ಹಳೇ ದ್ವೇಷ ಸಾಧಿಸುತ್ತಿದ್ದ ಯಶ್ ಖಾಟಿಕ್, ಚಿರಾಗ್‌ನನ್ನು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿ ಚಿರಾಗ್ ತ್ಯಾಗಿ ಅವರ ಬೆನ್ನಿಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಕಟುಕ ಆರೋಪಿ ಯಶ್ ಖಾಟಿಕ್‌ನನ್ನು ಬಂಧಿಸಿದ್ದು, ಹತ್ಯೆಗೆ ಬಳಸಲಾದ ಪಿಸ್ತೂಲ್‌ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.



