June 1, 2026
Monday, June 1, 2026
spot_img

ಆರ್‌ಸಿಬಿ ವಿಜಯೋತ್ಸವದ ಜಬರ್ದಸ್ತ್ ಕ್ರೇಜ್: ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್ ಕೇಸ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ 2026ರ ಮಹಾ ಗೆಲುವಿನ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಭಾನುವಾರ (ಮೇ 31) ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದು ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ಅಭಿಮಾನಿಗಳು ರಸ್ತೆಗಿಳಿದ ಬೆನ್ನಲ್ಲೇ, ನಿಯಮ ಉಲ್ಲಂಘಿಸಿದವರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಒಂದೇ ರಾತ್ರಿಯಲ್ಲಿ 260 ಮಂದಿ ಸಿಕ್ಕಿಬಿದ್ದಿದ್ದು ಹೇಗೆ?

ಆರ್‌ಸಿಬಿ ತಂಡ ಚಾಂಪಿಯನ್ ಆಗುತ್ತಿದ್ದಂತೆ ಇಡೀ ಬೆಂಗಳೂರಿನಾದ್ಯಂತ ಅಭಿಮಾನಿಗಳ ಕ್ರೇಜ್ ಜೋರಾಗಿತ್ತು. ಮಧ್ಯರಾತ್ರಿಯೇ ಬೈಕ್ ರ‍್ಯಾಲಿ ನಡೆಸಿ, ಆರ್‌ಸಿಬಿ ಪರ ಘೋಷಣೆಗಳನ್ನು ಕೂಗುತ್ತಾ, ಪಟಾಕಿ ಸಿಡಿಸಿ ಫ್ಯಾನ್ಸ್ ವಿಜಯೋತ್ಸವ ಆಚರಿಸಿದರು. ಆದರೆ, ಇದೇ ಸಂಭ್ರಮದ ನೆಪದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದವರನ್ನು ಹಿಡಿಯಲು ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ಒಂದೇ ರಾತ್ರಿಯಲ್ಲಿ ನಗರದ ವಿವಿಧೆಡೆ ಬರೋಬ್ಬರಿ 260 ಡ್ರಿಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಫ್ಲೈಓವರ್‌ಗಳು ಬಂದ್:

ಐಪಿಎಲ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಅಥವಾ ಭೀಕರ ರಸ್ತೆ ಅಪಘಾತಗಳು ಸಂಭವಿಸಬಾರದು ಎಂಬ ಕಾರಣಕ್ಕೆ ಸಂಚಾರಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ಹೀಗಾಗಿ ಭಾನುವಾರ ರಾತ್ರಿ 11 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ಬೆಂಗಳೂರಿನ ಪ್ರಮುಖ ಫ್ಲೈಓವರ್‌ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಆದೇಶ ಹೊರಡಿಸಲಾಗಿತ್ತು. ಪೊಲೀಸರ ಈ ಸಮಯೋಚಿತ ಕ್ರಮ ಹಾಗೂ ಬಿಗಿ ಭದ್ರತೆಯ ನಡುವೆಯೂ ನಿಯಮ ಮುರಿದು ಸಿಕ್ಕಿಬಿದ್ದ 260 ಸವಾರರಿಗೆ ಈಗ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !