June 2, 2026
Tuesday, June 2, 2026
spot_img

ಲಕ್ಷಾಂತರ ರೂ. ಸಾಲ, ಪೊಲೀಸರ ಅಸಹಕಾರ: ವ್ಯಕ್ತಿಯ ಆತ್ಮಹತ್ಯೆಗೆ ಕಾರಣವಾಯ್ತಾ ವ್ಯವಸ್ಥೆಯ ನಿರ್ಲಕ್ಷ್ಯ?

ಹೊಸದಿಗಂತ ಬೆಳಗಾವಿ:

ಜಿಲ್ಲೆಯ ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಸಾರ್ವಜನಿಕರನ್ನು ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸಾಲದ ಬಾಧೆ, ಜೀವ ಬೆದರಿಕೆ ಹಾಗೂ ಪೊಲೀಸರಿಂದ ನ್ಯಾಯ ಸಿಗಲಿಲ್ಲ ಎಂದು ಮನನೊಂದ ವ್ಯಕ್ತಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು ರವೀಂದ್ರ ದಾನವ್ವಗೋಳ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ರವೀಂದ್ರ ಅವರು ಬರೆದಿಟ್ಟಿದ್ದಾರೆ ಎನ್ನಲಾದ ಪತ್ರ ಸಿಕ್ಕಿದ್ದು, ಅದರಲ್ಲಿ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ವ್ಯಕ್ತಿಗಳ ಹೆಸರು ಉಲ್ಲೇಖವಾಗಿರುವುದು ಈಗ ತೀವ್ರ ಸಂಚಲನ ಮೂಡಿಸಿದೆ.

ಡೆತ್‌ನೋಟ್‌ನಲ್ಲಿ ಏನಿದೆ?

ಮೃತ ರವೀಂದ್ರ ಅವರು ಬರೆದಿಟ್ಟಿರುವ ಪತ್ರದ ಪ್ರಕಾರ, ತಾವು ಲಕ್ಷ್ಮಣ್ ಚಂದರಗಿ ಹಾಗೂ ಭರಮಪ್ಪ ಪೂಜಾರಿ ಎಂಬುವರಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಾಲದ ಹಣವನ್ನು ವಾಪಸ್ ಕೇಳುವ ನೆಪದಲ್ಲಿ ತಮಗೆ ನಿರಂತರವಾಗಿ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಈ ಜೀವ ಬೆದರಿಕೆಯಿಂದ ತೀವ್ರ ಕಂಗೆಟ್ಟು, ಬೇರೆ ದಾರಿಯಿಲ್ಲದೆ ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರ ವಿರುದ್ಧವೇ ಗಂಭೀರ ಆರೋಪ:

ರವೀಂದ್ರ ಅವರು ತಮಗೆ ಬರುತ್ತಿದ್ದ ಜೀವ ಬೆದರಿಕೆ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆದರೆ ದೂರು ನೀಡಿದ ಮೇಲೂ ತಮಗೆ ಯಾವುದೇ ನ್ಯಾಯ ಸಿಗಲಿಲ್ಲ ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಪಿಎಸ್ಐ ಆನಂದ್ ಹಾಗೂ ಹಿಂದಿನ ಡಿವೈಎಸ್ಪಿ ಮುಲ್ಲಾ ಅವರಿಂದಲೂ ತನಗೆ ತೀವ್ರ ಅನ್ಯಾಯವಾಗಿದೆ ಎಂದು ಅಧಿಕಾರಿಗಳ ಹೆಸರನ್ನೇ ಪತ್ರದಲ್ಲಿ ಬರೆದಿಟ್ಟಿದ್ದಾರೆ.

ಕುಟುಂಬಸ್ಥರ ಆಕ್ರಂದನ: ರವೀಂದ್ರ ಅವರು ತಮ್ಮ ಸ್ವಗೃಹದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಕರಣ ದಾಖಲು, ತನಿಖೆ ಚುರುಕು:

ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತರ ಪತ್ನಿ ನೀಡಿದ ಅಧಿಕೃತ ದೂರಿನ ಅನ್ವಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !