ಹೊಸ ದಿಗಂತ ವರದಿ, ಮಂಗಳೂರು:
ಸರ್ಕಾರ ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಕೊಟ್ಟರೆ ಮಂತ್ರಿ, ಇಲ್ಲದಿದ್ದರೆ ಸ್ಪೀಕರ್
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪೀಕರ್ ಆಗಿಯೇ ಇದ್ದೇನೆ, ನಾನು ಯಾವುದೇ ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ. ಯಾರಿಗೆ ಯಾವ ಸ್ಥಾನ ಕೊಡಬೇಕು ಎಂಬುದು ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಬಿಟ್ಟ ವಿಚಾರ. ಕೊಟ್ಟರೆ ಮಂತ್ರಿ, ಇಲ್ಲದಿದ್ದರೆ ಸ್ಪೀಕರ್, ಅದಿಲ್ಲದಿದ್ದರೆ ಶಾಸಕನಾಗಿ ಜವಾಬ್ದಾರಿ ನಿರ್ವಹಿಸುವೆ ಎಂದರು.
ನನಗೆ ಪೋಸ್ಟ್ ಮುಖ್ಯವಲ್ಲ
2023ರಲ್ಲಿ ಮಂತ್ರಿ ಸ್ಥಾನದ ಲಿಸ್ಟ್‌ನಲ್ಲಿ ನನ್ನ ಹೆಸರಿದೆ ಎಂದು ಇತ್ತು. ಆದರೆ ಬಳಿಕ ಸಭಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಅದನ್ನು ಯಾವುದೇ ಚರ್ಚೆ ಇಲ್ಲದೆ ತೆಗೆದುಕೊಂಡು ನಿಷ್ಠೆಯಿಂದ ನಿಭಾಯಿಸಿದ್ದೇನೆ. ನನಗೆ ಪೋಸ್ಟ್ ಮುಖ್ಯವಲ್ಲ ಎಂದರು.
ಜಮೀರ್ ಅಹ್ಮದ್ ಆಡಿಯೋ ವೈರಲ್ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗ ನಾನು ಇದರ ಬಗ್ಗೆ ಮಾತನಾಡುವುದಿಲ್ಲ. ಸಭಾಧ್ಯಕ್ಷ ಸ್ಥಾನ ಬಿಟ್ಟು ಬಂದ ಬಳಿಕ ರಾಜಕೀಯ ವಿಚಾರದ ಬಗ್ಗೆ ಮಾತನಾಡುತ್ತೇನೆ ಎಂದರು.
ಯಾವ ಸೂಚನೆ ಈವರೆಗೆ ಸಿಕ್ಕಿಲ್ಲ
ಪಕ್ಷ ಸೂಚಿಸಿದಲ್ಲಿ ಸ್ಪೀಕರ್ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಆದರೆ ರಾಜಿನಾಮೆ ನೀಡುವಂತೆ ನನಗೆ ಯಾವ ಸೂಚನೆ ಈವರೆಗೆ ಸಿಕ್ಕಿಲ್ಲ. ಸ್ಪೀಕರ್ ಆಗಿ ನಾನು ಸಂತೋಷದಿಂದ್ದೇನೆ. ಶಾಸಕನಾದವ ಒಮ್ಮೆಯಾದರೂ ಜೀವನದಲ್ಲಿ ಸ್ಪೀಕರ್ ಆಗಬೇಕು. ನಮ್ಮನ್ನು ಇಷ್ಟು ಬೆಳೆಸಿದ್ದು ಪಕ್ಷ, ಕಾರ್ಯಕರ್ತರು, ಮತದಾರರು ಯು.ಟಿ. ಖಾದರ್ ಹೇಳಿದರು.
ರಾಷ್ಟ್ರೀಯ ಇ ವಿಧಾನ್
ವಿಧಾನ ಪರಿಷತ್ ಕಲಾಪಗಳನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ಡಿಜಿಟಲೀಕರಣ ಮಾಡುವ ಯೋಜನೆಯಂತೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಇ ವಿಧಾನ್ ಅಪ್ಲಿಕೇಷನ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಮುಂದಿನ ಆರು ತಿಂಗಳಲ್ಲಿ ಈ ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ವಿಧಾನ ಮಂಡಲದ ಡಿಜಿಟಲೀಕರಣ ಯೋಜನೆ ಡಿಪಿಆರ್ ಹಂತದಲ್ಲಿದ್ದು, ಅನುಷ್ಠಾನದ ಬಳಿಕ ಉಭಯ ಸದನಗಳ ಶಾಸಕರಿಗೆ ಅದರ ಬಳಕೆ ಬಗ್ಗೆ ತರಬೇತಿ ನೀಡಲಾಗುವುದು ಎಂದರು.



