ಹೊಸದಿಗಂತ ವರದಿ ಚಿತ್ರದುರ್ಗ:
ಸರ್ಕಾರಿ ಸೇವೆಯಲ್ಲಿ ಬಡ್ತಿ ಎನ್ನುವುದು ಪ್ರತಿಯೊಬ್ಬ ಉದ್ಯೋಗಿಯ ಕನಸಾಗಿರುತ್ತದೆ. ಇದು ದಶಕಗಳ ಕಾಲ ಇಲಾಖೆಗಳಲ್ಲಿ ಹಗಲಿರುಳು ಶ್ರಮಿಸುವ ಪ್ರತಿಯೊಬ್ಬ ನಿಷ್ಠಾವಂತ ನೌಕರನ ಮನದಾಳದ ಮಾತಾಗಿರುತ್ತದೆ. ವರ್ಷಗಳ ಕಾಲ ಒಂದೇ ಕುರ್ಚಿಯಲ್ಲಿ ಕುಳಿತು, ಸಾರ್ವಜನಿಕರ ಸೇವೆ ಮಾಡುತ್ತಾ, ಕಡತಗಳ ಬೆನ್ನಟ್ಟಿ ದುಡಿಯುವ ಉದ್ಯೋಗಿಗೆ ‘ಬಡ್ತಿ’ ಎನ್ನುವುದು ಕೇವಲ ಸಂಬಳದ ಹೆಚ್ಚಳವಲ್ಲ; ಅದು ಆತನ ಪ್ರಾಮಾಣಿಕತೆಗೆ ಸಿಗುವ ಅತ್ಯುನ್ನತ ಗೌರವ.
ಆದರೆ ಇಲ್ಲೊಬ್ಬ ಸರ್ಕಾರಿ ನೌಕರನ ದಶಕಗಳ ಕಾಯುವಿಕೆಯ ಕನಸು ನನಸಾದ ಮರುಕ್ಷಣವೇ ನಿವೃತ್ತಿಯ ಅನಿವಾರ್ಯತೆ ಎದುರಾದ ಅತ್ಯಂತ ಅಪರೂಪದ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಸೇವೆಯಲ್ಲಿ ನಡೆದಿದೆ.ಬಡ್ತಿ ಸಿಕ್ಕ ಖುಷಿ ಒಂದು ಕಡೆಯಾದರೆ, ಅದೇ ಸೀಟಿನಲ್ಲಿ ಕೇವಲ ಒಂದೇ ಒಂದು ದಿನ ಕೂತು ನಿವೃತ್ತಿಯಾಗುವ ವಿಚಿತ್ರ ಪರಿಸ್ಥಿತಿಗೆ ಈ ಅಧಿಕಾರಿ ಸಾಕ್ಷಿಯಾಗಿದ್ದಾರೆ.
ಏನಿದು ಅಪರೂಪದ ಕಥೆ?
ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ‘ವೃಂದ-ಸಿ’ ಸ್ಕಿಲ್ ಟ್ರೇಡ್ಸ್‌ಮನ್ ಆಗಿದ್ದ ವೈ.ಕೆ. ಮಲ್ಲಪ್ಪಗೆ ಮೇ 29ರಂದು ‘ವೃಂದ-ಬಿ’ ಸೇವಾ ಅಭಿಯಂತರರಾಗಿ ಬಡ್ತಿ ಸಿಕ್ಕಿತ್ತು. ಆದರೆ 1966 ಜೂನ್ 1ರಂದು ಜನಿಸಿದ ಮಲ್ಲಪ್ಪಗೆ ಮೇ 31 ಕ್ಕೆ ಸರಿಯಾಗಿ 60 ವರ್ಷ ಪೂರೈಸಿ ನಿವೃತ್ತಿಯಾಗಬೇಕಿತ್ತು. ಮೇ 31 ಭಾನುವಾರ ಬಂದಿದ್ದರಿಂದ, ನಿಯಮದ ಪ್ರಕಾರ ಮೇ 30 ರ ಶನಿವಾರ ಮಧ್ಯಾಹ್ನವೇ ಅವರು ನಿವೃತ್ತಿ ಹೊಂದಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.
ಕೇವಲ ಒಂದೇ ದಿನದ ‘ಅಧಿಕಾರ’!
ಮೇ 30 ರ ಶನಿವಾರ ಬೆಳಗ್ಗೆ ಅತ್ಯಂತ ಸಡಗರದಿಂದ ಹೊಸ ಉನ್ನತ ಹುದ್ದೆಯ ಚುಕ್ಕಾಣಿ ಹಿಡಿದ ಮಲ್ಲಪ್ಪ, ಅದೇ ದಿನ ಸಂಜೆ ಇಲಾಖೆಯಿಂದ ಅಧಿಕೃತವಾಗಿ ಬೀಳ್ಕೊಡುಗೆ ಪಡೆದರು. ವರ್ಷಗಳ ಕಾಲ ಕಾದ ಹುದ್ದೆಯಲ್ಲಿ ಕೆಲಸ ಮಾಡಲು ಕೆಲವೇ ಕೆಲವು ಗಂಟೆಗಳ ಕಾಲಾವಕಾಶ ಸಿಕ್ಕಿದ್ದು ಬೇಸರ ತಂದರೂ, ಉನ್ನತ ಅಧಿಕಾರಿಯಾಗಿ ಸನ್ಮಾನದೊಂದಿಗೆ ನಿವೃತ್ತಿ ಪಡೆದದ್ದು ಅವರ ವೃತ್ತಿಜೀವನದ ಒಂದು ರೋಮಾಂಚಕ ಅಧ್ಯಾಯವಾಗಿ ಉಳಿಯಿತು.



