June 4, 2026
Thursday, June 4, 2026
spot_img

ಮುಂಗಾರು ಮಳೆ ಆರ್ಭಟಕ್ಕೆ ಸಜ್ಜಾದ ಕರಾವಳಿ: ಕಡಲು, ನದಿ ತೀರ, ಟ್ರೆಕ್ಕಿಂಗ್‌ಗೆ ನಿಷೇಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳಕ್ಕೆ ಕೊನೆಗೂ ಮುಂಗಾರು ಮಾರುತಗಳು ಪ್ರವೇಶ ಮಾಡಿರುವುದಾಗಿ ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ತಿಳಿಸಿದೆ. ಇದರ ಬೆನ್ನಲ್ಲೇ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೂ ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆ ಆಗಮನವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಮಳೆಗಾಲದ ಆರಂಭದಲ್ಲೇ ಸಂಭವಿಸಬಹುದಾದ ನೆರೆ, ಪ್ರವಾಹ ಹಾಗೂ ಭೂಕುಸಿತದಂತಹ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ನೇತೃತ್ವದಲ್ಲಿ ಹೈ ಅಲರ್ಟ್

ಕರಾವಳಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಉಂಟಾಗುವ ಅವಾಂತರಗಳು ಮತ್ತು ಪ್ರಾಣಹಾನಿಯ ಆತಂಕವನ್ನು ತಪ್ಪಿಸಲು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು 24 ಗಂಟೆಯೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳಿಗೆ ಪ್ರತ್ಯೇಕ ಇಂಜಿನಿಯರ್‌ಗಳನ್ನು, 223 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒಗಳನ್ನು ಹಾಗೂ 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ‘ಇನ್ಸಿಡೆಂಟ್ ಕಮಾಂಡರ್’ಗಳಾಗಿ ನೇಮಕ ಮಾಡಲಾಗಿದ್ದು, ಇವರೆಲ್ಲರೂ ಜಿಲ್ಲಾಧಿಕಾರಿ ಕಚೇರಿಯ ನೇರ ಸಂಪರ್ಕದಲ್ಲಿ ಇರಲಿದ್ದಾರೆ.

ರಕ್ಷಣೆಗೆ ಧಾವಿಸಲಿದೆ NDRF ತಂಡ

ಯಾವುದೇ ಅನಾಹುತಗಳನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ 25 ಸಿಬ್ಬಂದಿ ಒಳಗೊಂಡ ಎನ್‌ಡಿಆರ್‌ಎಫ್ ತಂಡವನ್ನು ಪುತ್ತೂರು ತಾಲ್ಲೂಕಿನಲ್ಲಿ ಹಾಗೂ 10 ಸಿಬ್ಬಂದಿಯ ಮತ್ತೊಂದು ತಂಡವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿಯೋಜಿಸಲಾಗಿದೆ.

ಗಮನಿಸಬೇಕಾದ ಪ್ರಮುಖ ಅಂಶಗಳು:

ಪ್ರವಾಹ ಪೀಡಿತ ಪ್ರದೇಶಗಳು: ಜಿಲ್ಲೆಯಲ್ಲಿ ಒಟ್ಟು 92 ಪ್ರದೇಶಗಳನ್ನು ಗುರುತಿಸಲಾಗಿದೆ.

ಭೂಕುಸಿತ ಸೂಕ್ಷ್ಮ ಪ್ರದೇಶಗಳು: 88 ಕಡೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.

ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಕಡ್ಡಾಯ ನಿರ್ಬಂಧ

ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರ ಜೀವ ರಕ್ಷಣೆಗಾಗಿ ಜಿಲ್ಲಾಡಳಿತ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಗುಡ್ಡಗಾಡು ಪ್ರದೇಶಗಳಲ್ಲಿ ಚಾರಣ ಮಾಡುವುದನ್ನು, ನದಿ ತೀರ ಹಾಗೂ ಸಮುದ್ರ ತೀರಕ್ಕೆ ಇಳಿಯುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ನಿಯಮ ಮೀರಿ ಅಪಾಯಕಾರಿ ಸ್ಥಳಗಳಿಗೆ ಭೇಟಿ ನೀಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !