June 6, 2026
Saturday, June 6, 2026
spot_img

ಟೀಮ್ ಇಂಡಿಯಾ ಇತಿಹಾಸದಲ್ಲೇ ಅತಿ ಕಿರಿಯ ಆಟಗಾರನಿಗೆ ಮಣೆ; ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ಮಹತ್ತರ ಇತಿಹಾಸವೊಂದು ಸೃಷ್ಟಿಯಾಗಿದೆ. ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಭಾರತ ಹಿರಿಯರ ಟಿ20 ತಂಡಕ್ಕೆ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಮುಂಬರುವ ಇಂಗ್ಲೆಂಡ್, ಐರ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಗೇಮ್ಸ್ ಪಂದ್ಯಾವಳಿಗಳಿಗಾಗಿ ಬಿಸಿಸಿಐ ಪ್ರಕಟಿಸಿರುವ ನೂತನ ಟಿ20 ತಂಡದಲ್ಲಿ ಈ ಯುವ ಸೆನ್ಸೇಷನ್‌ಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ದಶಕಗಳ ಹಳೆಯ ದಾಖಲೆಯೊಂದು ಪತನಗೊಂಡಿದೆ.

ಸಚಿನ್ ತೆಂಡೂಲ್ಕರ್ ದಾಖಲೆ ಬ್ರೇಕ್ ಮಾಡಿದ 15ರ ಹರೆಯದ ಕಿಂಗ್!
ವೈಭವ್ ಸೂರ್ಯವಂಶಿಯ ಈ ಆಯ್ಕೆ ಕೇವಲ ಸಾಮಾನ್ಯ ಪ್ರವೇಶವಲ್ಲ, ಇದೊಂದು ಐತಿಹಾಸಿಕ ಮೈಲಿಗಲ್ಲು. ಭಾರತ ಹಿರಿಯರ ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ. ಈ ಹಿಂದೆ 1989 ರಲ್ಲಿ 16 ವರ್ಷ 205 ದಿನಗಳ ಪ್ರಾಯದಲ್ಲಿ ಟೀಮ್ ಇಂಡಿಯಾ ಪರ ಸಚಿನ್ ತೆಂಡೂಲ್ಕರ್ ಕಣಕ್ಕಿಳಿದಿದ್ದರು. ಈಗ 15 ವರ್ಷದಲ್ಲೇ ಟೀಮ್ ಇಂಡಿಯಾ ಟಿಕೆಟ್‌ನಲ್ಲಿ ಸ್ಥಾನ ಪಡೆಯುವ ಮೂಲಕ ವೈಭವ್, ಸಚಿನ್ 36 ವರ್ಷಗಳ ಹಳೆಯ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.

ಐಪಿಎಲ್ 2026ರ ಭರ್ಜರಿ ಪ್ರದರ್ಶನಕ್ಕೆ ಸಿಕ್ಕ ಬಂಪರ್ ಗಿಫ್ಟ್
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಪರ ಆಡಿದ್ದ ಈ ಎಡಗೈ ಬ್ಯಾಟರ್ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಇಡೀ ಸೀಸನ್‌ನಲ್ಲಿ ಭರ್ಜರಿ 776 ರನ್ ಚಚ್ಚುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ ‘ಆರೆಂಜ್ ಕ್ಯಾಪ್’ ಮುಡಿಗೇರಿಸಿಕೊಂಡ ವಿಶ್ವದ ಮೊದಲ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದ್ದರು.

ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದ ಕ್ರಿಸ್ ಗೇಲ್‌ರ ಸುದೀರ್ಘ ಅವಧಿಯ ದಾಖಲೆಯನ್ನು ವೈಭವ್ ಮುರಿದಿದ್ದರು. ಈ ಅಸಾಧಾರಣ ಪ್ರದರ್ಶನವೇ ಅವರಿಗೆ ಈಗ ನೇರವಾಗಿ ಭಾರತ ತಂಡದ ಬಾಗಿಲು ತೆರೆಯುವಂತೆ ಮಾಡಿದೆ.

ಶ್ರೇಯಸ್ ಅಯ್ಯರ್ ಕೈಗೆ ಟಿ20 ನಾಯಕತ್ವದ ಚುಕ್ಕಾಣಿ
ವೈಭವ್ ಸೂರ್ಯವಂಶಿ ಐತಿಹಾಸಿಕ ಎಂಟ್ರಿಯ ಬೆನ್ನಲ್ಲೇ, ಭಾರತ ಟಿ20 ತಂಡದಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ. ಹಿರಿಯ ಆಟಗಾರ ಶ್ರೇಯಸ್ ಅಯ್ಯರ್‌ನ್ನು ಟಿ20 ತಂಡದ ನೂತನ ನಾಯಕನನ್ನಾಗಿ ಬಿಸಿಸಿಐ ನೇಮಕ ಮಾಡಿದೆ. 2028ರ ಒಲಿಂಪಿಕ್ಸ್ ಮತ್ತು ಮುಂಬರುವ ಟಿ20 ವಿಶ್ವಕಪ್‌ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ಯುವಕರಿಗೆ ಮಣೆ ಹಾಕಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !