ಹೊಸ ದಿಗಂತ ವರದಿ, ಬೆಳಗಾವಿ:
ಶಿವಂ ಅಸೋಸಿಯೇಟ್ಸ್ ಖಾತೆಯನ್ನು ಪೊಲೀಸರು ಫ್ರೀಜ್ ಮಾಡಿದ್ದರೂ ಜನ ಇಂದಿಗೂ ಹಣ ಜಮಾ ಮಾಡುತ್ತಿದ್ದಾರೆ ಎಂದು ಬೆಳಗಾವಿ ಡಿಐಜಿಪಿ ಡಾ. ಭೀಮಾಶಂಕರ್ ಗುಳೇದ್ ತಿಳಿಸಿದರು.
ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಶಿವಾನಂದ ನೀಲಣ್ಣವರ ಹಾಗೂ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಗೆ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಲು ಆರ್.ಬಿ.ಐ ಯಾವುದೇ ಬ್ಯಾಂಕಿಂಗ್ ಲೈಸೆನ್ಸ್ ಅಥವಾ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಮಿಷ ಒಡ್ಡಿದರೆ ತಕ್ಷಣ ದೂರು ನೀಡಿ
ಸಾರ್ವಜನಿಕರು ದುರಾಸೆಗೆ ಬಿದ್ದು ಇಂತಹ ಕಾನೂನು ಬಾಹಿರ ಕಂಪನಿಗಳನ್ನು ನಂಬಿ ಮತ್ತೊಮ್ಮೆ ಹಣ ಹೂಡಿ ಮೋಸ ಹೋಗಬಾರದು. ಯಾರಾದರೂ ಆಮಿಷ ಒಡ್ಡಿದರೆ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಅವರು ತಿಳಿಸಿದರು.
ಬ್ಯಾಂಕ್ ಖಾತೆ ಫ್ರೀಜ್
ಭಾರತದಲ್ಲಿ ವಾರ್ಷಿಕ ಶೇಕಡಾ 36 ರಿಂದ 60 ರಷ್ಟು ಲಾಭ ನೀಡುವ ಯಾವುದೇ ಯೋಜನೆಗಳಿಲ್ಲ. ಆರೋಪಿಗಳು ನಿಯಮಬಾಹಿರವಾಗಿ ಸಾರ್ವಜನಿಕರನ್ನು ದುರಾಸೆಗೆ ಹಣ ವಸೂಲಿ ಮಾಡುತ್ತಿದ್ದರು. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬ್ಯಾಂಕ್ ಖಾತೆಗಳನ್ನು ಡೆಬಿಟ್ ಫ್ರೀಜ್ ಮಾಡಿದ್ದರೂ, ಜನ ಇಂದಿಗೂ ಆ ಖಾತೆಗಳಿಗೆ ಹಣ ಜಮಾ ಮಾಡುತ್ತಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದು ಆತಂಕಕಾರಿ ಎಂದರು.
ಬರೋಬ್ಬರಿ 2,400 ಕೋಟಿ ಸಂಗ್ರಹ
ಪ್ರಾಥಮಿಕ ತನಿಖೆಯಲ್ಲಿ ಶಿವಂ ಅಸೋಸಿಯೇಟ್ಸ್ ಬರೋಬ್ಬರಿ 2,400 ಕೋಟಿ ರೂಪಾಯಿ ಹಣ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಆರೋಪಿ ಶಿವಾನಂದ ಯಾವುದೇ ಕೃಷಿ ಅಥವಾ ಅಧಿಕೃತ ವ್ಯವಹಾರದಲ್ಲಿ ಹಣ ತೊಡಗಿಸಿರಲಿಲ್ಲ, ಬದಲಿಗೆ ಹೊಸ ಠೇವಣಿದಾರರ ಹಣವನ್ನು ಹಳೆ ಜನರಿಗೆ ಬಡ್ಡಿ ರೂಪದಲ್ಲಿ ಹಂಚುತ್ತಿದ್ದ. ಸಂಗ್ರಹವಾದ ಮೊತ್ತದಲ್ಲಿ 540 ಕೋಟಿ ರೂಪಾಯಿಯನ್ನು ಸ್ಯಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿ, ಅದರಲ್ಲಿ 170 ಕೋಟಿ ರೂಪಾಯಿ ಕಳೆದುಕೊಂಡು ಕೈ ಸುಟ್ಟುಕೊಂಡಿದ್ದಾನೆ. ಒಟ್ಟು ಹಣದಲ್ಲಿ ಸದ್ಯ 660 ಕೋಟಿ ರೂಪಾಯಿ ವ್ಯತ್ಯಾಸ ಕಂಡುಬಂದಿದ್ದು, ಅದರಲ್ಲಿ 390 ಕೋಟಿ ರೂಪಾಯಿ ಬೇರೆ ಮೂಲಗಳಿಂದ ಸಿಗುವ ಸಾಧ್ಯತೆಯಿದೆ. ಈ ಯೋಜನೆಯು ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಮುಳುಗಡೆಯಾಗುವ ದೊಡ್ಡ ಅನಾಹುತವನ್ನು ಪೊಲೀಸರು ಮುಂಚಿತವಾಗಿಯೇ ತಪ್ಪಿಸಿದ್ದಾರೆ ಎಂದರು.
ಶಿವಂ ಅಸೋಷಿಯೇಟ್ಸ್ ಸಂಸ್ಥೆಯು ಕರ್ನಾಟಕ ಮತ್ತು ಮಹಾರಾಷ್ಟ್ರದಾದ್ಯಂತ ಸುಮಾರು 40,700 ಗ್ರಾಹಕರನ್ನು ಹೊಂದಿದ್ದು, ಮಹಾರಾಷ್ಟ್ರ ಪೊಲೀಸರೊಂದಿಗೂ ಮಾಹಿತಿ ಹಂಚಿಕೊಳ್ಳಲಾಗಿದೆ. ಕಂಪನಿ ಖಾತೆಯಿಂದ ಕಾನೂನು ಬಾಹಿರವಾಗಿ ವೈಯಕ್ತಿಕ ಖಾತೆಗೆ ವರ್ಗಾಯಿಸಲಾಗಿದ್ದ 55 ಕೋಟಿ ರೂಪಾಯಿ, 5 ಐಷಾರಾಮಿ ಕಾರುಗಳು ಹಾಗೂ 250 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕೆಪಿಐಡಿ ಕಾಯ್ದೆಯಡಿ ವಿಶೇಷ ಅಧಿಕಾರಿಯನ್ನು ನೇಮಿಸಿ ಜಪ್ತಿ ಮಾಡಿದ ಆಸ್ತಿಯನ್ನು ಸಾರ್ವಜನಿಕರಿಗೆ ಮರಳಿಸುವ ಪ್ರಕ್ರಿಯೆ ನಡೆಯಲಿದೆ. ಇನ್ನು ಅನಿಯಂತ್ರಿತ ಕಂಪನಿಯಲ್ಲಿ ಹಣ ಹೂಡಿ ಅಕ್ರಮವಾಗಿ ಹೆಚ್ಚಿನ ಲಾಭ ಪಡೆದ ಗ್ರಾಹಕರಿಗೂ ನೊಟೀಸ್ ನೀಡಲಾಗುವುದು ಹಾಗೂ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಯ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಡಿಐಜಿಪಿ ತಿಳಿಸಿದರು.



