ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ನನಗೆ ಇನ್ನೇನು ಸಿಗಬೇಕು ಅಷ್ಟರಲ್ಲಿ ಪಿತೂರಿಯಿಂದಾಗಿ ಅಧ್ಯಕ್ಷ ಸ್ಥಾನ ಕೈ ತಪ್ಪುವಂತೆ ಮಾಡಲಾಯಿತು ಎಂದು ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಪಿತೂರಿಯೊಂದು ತಡೆಯಿತು
ಈ ಕುರಿತು ಜೈಪುರದಲ್ಲಿ ಮಾತನಾಡಿರುವ ಅವರು, ನಾಯಕಿ ಸೋನಿಯಾ ಗಾಂಧಿ ಹಾಗು ಹೈಕಮಾಂಡ್ ನನ್ನನ್ನು ಅಭ್ಯರ್ಥಿಯನ್ನಾಗಿ ನಿರ್ಧರಿಸಿತ್ತು. ನಾನು ಆ ಹುದ್ದೆಯನ್ನು ಗೌರವದ ಸಂಕೇತವೆಂದು ಸ್ವೀಕರಿಸಲು ನಿರ್ಧರಿಸಿದ್ದೆ, ಆದರೆ ಪಿತೂರಿಯೊಂದು ನನ್ನನ್ನು ತಡೆಯಿತು ಎಂದು ಹೇಳಿದರು.
ಪಕ್ಷದ ವೀಕ್ಷಕರನ್ನು ರಾಜಸ್ಥಾನಕ್ಕೆ ಕಳುಹಿಸಿದ ಬಳಿಕ ದೊಡ್ಡ ಪಿತೂರಿ ನಡೆಯಿತು. ನಾನು ಕಾಂಗ್ರೆಸ್ನ ಉನ್ನತ ಹುದ್ದೆ ಏರುವ ಯೋಜನೆ ಕೈತಪ್ಪಿತು. ರಾಜಸ್ಥಾನದ ಸಿಎಂ ಹುದ್ದೆ ತೊರೆಯಲು ಬಯಸದ ಕಾರಣ ಅಧ್ಯಕ್ಷ ಪದವಿಯಿಂದ ಹಿಂದೆ ಸರಿದರು ಎಂದು ಹೇಳಲಾಯಿತು. ಆದರೆ ನಾನು ಹಿಂದೆ ಸರಿಯಲಿಲ್ಲ ಎಂದು ತಿಳಿಸಿದ್ದಾರೆ.



