ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆ.22 ರಿಂದ GST ಸುಧಾರಣೆಗಳು ಜಾರಿಗೆ ಬರಲಿದ್ದು, ಇದರ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ವಿಧಿಸಿರುವ ಸುಂಕಗಳ ಬೆದರಿಕೆಯ ನಡುವೆಯೂ, ಸೀತಾರಾಮನ್, ನಮ್ಮ ಅಗತ್ಯತೆಗಳು, ಬೆಲೆಗಳು ಮತ್ತು ಲಾಜಿಸ್ಟಿಕ್ಸ್ ಆಧಾರದ ಮೇಲೆ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ವಿದೇಶಿ ವಿನಿಮಯ ಮತ್ತು ಇಂಧನ ಸುರಕ್ಷತೆ ನಮಗೆ ಅತ್ಯಂತ ಮುಖ್ಯ. ಭಾರತದ ಒಟ್ಟು ಆಮದು ವೆಚ್ಚದಲ್ಲಿ ಕಚ್ಚಾ ತೈಲವು ಅತಿದೊಡ್ಡ ಪಾಲನ್ನು ಹೊಂದಿದೆ. ಅಗ್ಗದ ಮತ್ತು ಸ್ಥಿರವಾದ ತೈಲ ಎಲ್ಲಿಂದ ಲಭ್ಯವಾಗುತ್ತದೆಯೋ ಅಲ್ಲಿಂದ ನಾವು ಖರೀದಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಯು ನಮ್ಮ ಆರ್ಥಿಕ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ನಾವು ಖಂಡಿತವಾಗಿಯೂ ಅದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ರಾಷ್ಟ್ರವಾದ ಭಾರತ, ತನ್ನ ಇಂಧನ ಅಗತ್ಯಗಳನ್ನು ಪೂರೈಸಲು ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಒತ್ತಿಹೇಳಿದ ಸೀತಾರಾಮನ್, ನಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ರಷ್ಯಾದಿಂದ ತೈಲ ಖರೀದಿ ನಮ್ಮ ಆರ್ಥಿಕ ಯೋಜನೆಯ ಭಾಗವಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.