July 28, 2026
Tuesday, July 28, 2026
spot_img

ದಶಕದ ವೈರತ್ವ ಮರೆತು ಒಂದಾದರಾ ಸ್ಟಾರ್ ನಟರು? ಪವರ್ ಸ್ಟಾರ್ ಆರೋಗ್ಯ ವಿಚಾರಿಸಿದ ಪುಷ್ಪ ರಾಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವದಂತಿಗಳಿಗೆ ಇದೀಗ ತೆರೆ ಬಿದ್ದಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅಲ್ಲು ಅರ್ಜುನ್ ಅವರು ವೈಎಸ್ಆರ್ ಕರಾರಿನ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಮೆಗಾ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿತ್ತು. ನಾಗಬಾಬು ಅವರ ಪರೋಕ್ಷ ಪೋಸ್ಟ್‌ಗಳು ಹಾಗೂ ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರದ ಬಗ್ಗೆ ಪವನ್ ಆಡಿದ್ದ ಮಾತುಗಳು ಇಬ್ಬರ ನಡುವಿನ ಶೀತಲ ಸಮರವನ್ನು ತಾರಕಕ್ಕೇರಿಸಿದ್ದವು.

ಆದರೆ, ಬುಧವಾರ (ಜೂನ್ 10) ರಾತ್ರಿ ಪವನ್ ಕಲ್ಯಾಣ್ ನಿವಾಸಕ್ಕೆ ಭೇಟಿ ನೀಡಿದ ಅಲ್ಲು ಅರ್ಜುನ್, ಮೆಗಾ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ. ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಪವನ್ ಅವರ ಯೋಗಕ್ಷೇಮವನ್ನು ಅಲ್ಲು ಅರ್ಜುನ್ ಆತ್ಮೀಯವಾಗಿ ವಿಚಾರಿಸಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಈಗಾಗಲೇ ಪವನ್ ಆರೋಗ್ಯ ವಿಚಾರಿಸಿದ್ದು, ಇದೀಗ ಅಲ್ಲು ಅರ್ಜುನ್ ಭೇಟಿ ತೀವ್ರ ಕುತೂಹಲ ಮೂಡಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಮೆಗಾ’ ಮತ್ತು ‘ಅಲ್ಲು’ ಅಭಿಮಾನಿಗಳ ನಡುವೆ ತೀವ್ರ ವಾಕ್ಸಮರ ನಡೆಯುತ್ತಿತ್ತು. ಆದರೆ, ಉಭಯ ಕುಟುಂಬಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲವೂ ಕೇವಲ ವದಂತಿಗಳಷ್ಟೇ ಎಂದು ಆಪ್ತ ವಲಯ ಸ್ಪಷ್ಟಪಡಿಸಿದೆ. ಪರಸ್ಪರ ಸಿನಿಮಾಗಳನ್ನು ಬೆಂಬಲಿಸುತ್ತಾ ಬಂದಿರುವ ಈ ಇಬ್ಬರು ಸ್ಟಾರ್ ನಟರ ಭೇಟಿಯು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !