ಹೊಸದಿಗಂತ ಬೆಳಗಾವಿ:
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಅಭಿಯಾನವನ್ನು ಮುಂದುವರಿಸಿದ್ದಾರೆ. ಕೇವಲ ಗೃಹ ಕಚೇರಿಗಷ್ಟೇ ಸೀಮಿತವಾಗದೆ, ಸ್ವತಃ ತಾವೇ ವಿವಿಧ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.
ಗುರುವಾರ ಕ್ಷೇತ್ರದ ಓಂಕಾರ್ ನಗರ ಹಾಗೂ ಹಿಂಡಲಗಾ ಗ್ರಾಮದ ಸಂಕಲ್ಪ ಲೇಔಟ್‌ಗೆ ಭೇಟಿ ನೀಡಿದ ಶಾಸಕರು, ಸ್ಥಳೀಯ ನಿವಾಸಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ರಸ್ತೆ, ಚರಂಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಜನರ ಅಹವಾಲುಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಅವರು, ಸಮಸ್ಯೆಗಳಿಗೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ಇದೇ ವೇಳೆ, ಈ ಭಾಗಗಳಲ್ಲಿ ಈಗಾಗಲೇ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅವರು ಖುದ್ದಾಗಿ ಪರಿಶೀಲಿಸಿದರು. ಅಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಜಾರಿಗೆ ಬರಲಿರುವ ನೂತನ ಮೂಲಸೌಕರ್ಯ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಿದರು.
ಅಧಿಕಾರಾವಧಿಯುದ್ದಕ್ಕೂ ಕ್ಷೇತ್ರದ ಜನರೊಂದಿಗೆ ಜೀವಂತ ಸಂಪರ್ಕ ಕಾಯ್ದುಕೊಂಡು, ಸ್ಥಳದಲ್ಲೇ ಸಮಸ್ಯೆ ಇತ್ಯರ್ಥಪಡಿಸುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. “ನಮ್ಮ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಇಂತಹ ಜನಪರ ನಾಯಕಿಯನ್ನು ಪಡೆದಿರುವುದು ನಮ್ಮ ಹೆಮ್ಮೆ” ಎಂದು ಸ್ಥಳೀಯ ನಾಗರಿಕರು ಸಂತಸ ಹಂಚಿಕೊಂಡಿದ್ದಾರೆ. ಇವರ ಈ ಜನಸ್ಪಂದನಾ ಕಾರ್ಯ ಇತರ ಜನಪ್ರತಿನಿಧಿಗಳಿಗೂ ಮಾದರಿಯಾಗಿದೆ.



