Thursday, October 2, 2025

ಆಸ್ಟ್ರೇಲಿಯಾ ವಿರುದ್ಧದ ಭಾರತ-ಎ ತಂಡ ಘೋಷಣೆ: ಕ್ಯಾಪ್ಟನ್ ಯಾರು ಗೊತ್ತಾ?

ಯುಎಇಯಲ್ಲಿ ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ತೀವ್ರ ಸಿದ್ಧತೆ ನಡೆಸುತ್ತಿರುವ ವೇಳೆಯಲ್ಲೇ, ಬಿಸಿಸಿಐ ಇಂದು ಭಾರತ-ಎ ತಂಡವನ್ನು ಪ್ರಕಟಿಸಿದೆ. ಈ ತಂಡ ಆಸ್ಟ್ರೇಲಿಯಾ-ಎ ವಿರುದ್ಧ ಸೆಪ್ಟೆಂಬರ್ 16ರಿಂದ ನಡೆಯುವ ನಾಲ್ಕು ದಿನಗಳ 2 ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದ್ದು, ಶ್ರೇಯಸ್ ಅಯ್ಯರ್ ಅವರನ್ನು ನಾಯಕನಾಗಿ ನೇಮಿಸಲಾಗಿದೆ. ಧ್ರುವ್ ಜುರೆಲ್ ಉಪನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಈ ಸರಣಿಗೆ ಅನೇಕ ಅನುಭವಿ ಹಾಗೂ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಲಾಗಿದೆ. ದುಲೀಪ್ ಟ್ರೋಫಿಯಲ್ಲಿ ಉತ್ತಮ ಫಾರ್ಮ್ ತೋರಿದ್ದ ತಮಿಳುನಾಡಿನ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಎನ್. ಜಗದೀಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅದೇ ಟೂರ್ನಿಯಲ್ಲಿ 184 ರನ್ ಗಳಿಸಿದ್ದ ರುತುರಾಜ್ ಗಾಯಕ್ವಾಡ್ ಅವರನ್ನು ಈ ಬಾರಿ ಮತ್ತೆ ಕಡೆಗಣಿಸಲಾಗಿದೆ.

ಮೊದಲ ನಾಲ್ಕು ದಿನಗಳ ಪಂದ್ಯ ಸೆಪ್ಟೆಂಬರ್ 16ರಿಂದ 19ರವರೆಗೆ ಲಕ್ನೋದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಸೆಪ್ಟೆಂಬರ್ 23ರಿಂದ 26ರವರೆಗೆ ಲಕ್ನೋದಲ್ಲಿಯೇ ಆಯೋಜಿಸಲಾಗಿದೆ. ಇದಾದ ಬಳಿಕ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 5ರವರೆಗೆ ಕಾನ್ಪುರದಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಆದರೆ ಏಕದಿನ ಸರಣಿಗೆ ಭಾರತ-ಎ ತಂಡವನ್ನು ಇನ್ನೂ ಘೋಷಿಸಿಲ್ಲ. ವರದಿಗಳ ಪ್ರಕಾರ, ಆ ಸರಣಿಗೆ ರೋಹಿತ್ ಶರ್ಮಾ ಸೇರುವ ಸಾಧ್ಯತೆ ಇದೆ.

ಭಾರತ-ಎ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಮನ್ಯು ಈಶ್ವರನ್, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಹರ್ಷ್ ದುಬೆ, ಆಯುಷ್ ಬಡೋನಿ, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಕೆ. ಸುತಾರ್, ಯಶ್ ಠಾಕೂರ್.