ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಜೂನ್ 20ರಿಂದ ಭಾರತೀಯ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಎರಡನೇ ಹಂತ ಆರಂಭವಾಗಲಿದೆ. ಆದರೆ ಇರುವ ಕೆಲಸದ ಜೊತೆ ಈ ಕೆಲಸದ ಒತ್ತಡವನ್ನು ತಡೆದುಕೊಳ್ಳೋಕೆ ಆಗುತ್ತಿಲ್ಲ ಎಂದು ಬೂತ್ ಮಟ್ಟದ ಅಧಿಕಾರಿಗಳು ಹೇಳುತ್ತಿದ್ದಾರೆ.
ಅತಿಯಾದ ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಬರುತ್ತಿವೆ. ಚುನಾವಣಾ ಜವಾಬ್ದಾರಿಗಳಿಂದ ನಮಗೆ ಮುಕ್ತಿ ನೀಡಿ ಎಂದು ಇಂದು ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮುಂದೆ ಸುಮಾರು 500 ರಿಂದ 1,000 ಬಿಎಲ್‌ಒಗಳು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನೀಡಲಾಗಿರುವ ಅವಾಸ್ತವಿಕ ಗಡುವುಗಳು, ವಿಪರೀತ ಕೆಲಸದ ಹೊರೆ ಮತ್ತು ಹಿರಿಯ ಅಧಿಕಾರಿಗಳಿಂದ ಬರುತ್ತಿರುವ ತೀವ್ರ ಒತ್ತಡದ ವಿರುದ್ಧ ಬಿಎಲ್‌ಒ ಸಿಬ್ಬಂದಿ ಜಂಟಿಯಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಜೂನ್ 30ರಿಂದ ಮನೆ ಮನೆ ಸಮೀಕ್ಷೆ ತೀವ್ರಗೊಳ್ಳಲಿದೆ. ಇದರಲ್ಲಿ ಬಿಎಲ್‌ಒಗಳು ಭಾಗಿಯಾಗಬೇಕಿದೆ. ಆದರೆ ಯಾವುದೇ ಸಿದ್ಧತೆ ಇಲ್ಲದೆ ಹೆಚ್ಚಿನ ಕೆಲಸಕ್ಕೆ ಕ್ಷೇತ್ರಾಧಿಕಾರಿಗಳು ಹೈರಾಣಾಗಿದ್ದಾರೆ. ಒತ್ತಡ ಹೆಚ್ಚಾಗುತ್ತಿರುವ ಕಾರಣ ನಮ್ಮನ್ನು ಈ ಕರ್ತವ್ಯದಿಂದ ಮುಕ್ತರನ್ನಾಗಿ ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.



