Saturday, October 4, 2025

ಪ್ರಧಾನಿ ಮೋದಿಗೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಕರೆ: ಉಕ್ರೇನ್‌ ಸಂಘರ್ಷ ಕೊನೆಗೊಳಿಸುವ ಕುರಿತು ಮಾತುಕತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ದೂರವಾಣಿ ಸಂಭಾಷಣೆ ನಡೆಸಿದರು. ವಿವಿಧ ವಲಯಗಳಲ್ಲಿ ಎರಡೂ ದೇಶಗಳು ತಮ್ಮ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವಲ್ಲಿ ಮಾಡಿದ ಪ್ರಗತಿಯ ಬಗ್ಗೆ ಅವರು ಚರ್ಚಿಸಿದರು.

ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, ಫೆಬ್ರವರಿ 2022ರಲ್ಲಿ ಭುಗಿಲೆದ್ದ ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸುವ ಮಾರ್ಗಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾಗಿ ತಿಳಿಸಿದ್ದಾರೆ.

‘ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್‌ರೊಂದಿಗೆ ಉತ್ತಮ ಸಂಭಾಷಣೆ ನಡೆಸಿದೆ. ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ನಾವು ಪರಿಶೀಲಿಸಿದ್ದೇವೆ. ಕೆಲವು ವಿಷಯಗಳ ಬಗ್ಗೆ ಸಕಾರಾತ್ಮಕವಾಗಿ ನಿರ್ಣಯ ತೆಗೆದುಕೊಂಡಿದ್ದೇವೆ. ಉಕ್ರೇನ್‌ನಲ್ಲಿನ ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸುವ ಪ್ರಯತ್ನಗಳು ಸೇರಿದಂತೆ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯು ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ.