ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಒಟಿಟಿ ರಿಯಾಲಿಟಿ ಶೋ ‘ಲಾಕ್ ಅಪ್’ ಈಗ ಎರಡನೇ ಸೀಸನ್ನೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಈ ಬಾರಿ ಶೋಗೆ ‘ಲಾಕ್ ಅಪ್: ಸಚ್ ಯಾ ಸಜಾ’ ಎಂದು ನಾಮಕರಣ ಮಾಡಲಾಗಿದ್ದು, ಭಾರಿ ಬದಲಾವಣೆಗಳೊಂದಿಗೆ ಕಂಬ್ಯಾಕ್ ಮಾಡುತ್ತಿದೆ.
ಕಂಗನಾ ಔಟ್; ಫರಾ, ರಿತೇಶ್ ಇನ್!
ಮೊದಲ ಸೀಸನ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಬದಲಿಗೆ ಖ್ಯಾತ ನಿರ್ದೇಶಕಿ ಫರಾ ಖಾನ್ ಮತ್ತು ನಟ ರಿತೇಶ್ ದೇಶ್ಮುಖ್ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಂಗನಾ ಸದ್ಯ ಸಂಸದೆಯಾಗಿ ಸಕ್ರಿಯರಾಗಿರುವುದು ಕೂಡ ಈ ಬದಲಾವಣೆಗೆ ಒಂದು ಕಾರಣ ಎನ್ನಲಾಗಿದೆ.
ಏಕ್ತಾ ಕಪೂರ್ ಹೇಳಿದ್ದೇನು?: “ಈ ಬಾರಿ ಜೈಲರ್ ಮತ್ತು ಜಡ್ಜ್ ಕಾನ್ಸೆಪ್ಟ್ ಸೇರಿದಂತೆ ಶೋನ ಸಂಪೂರ್ಣ ಫಾರ್ಮ್ಯಾಟ್ ಬದಲಾಗಿದೆ. ಶೋಗೆ ಹೊಸ ಕಳೆ ನೀಡಲು ಈ ಮಹತ್ತರ ಬದಲಾವಣೆ ಅನಿವಾರ್ಯವಾಗಿತ್ತು.” ಎಂದು ಮುಂಬೈ ಲಾಂಚ್ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಏಕ್ತಾ ಕಪೂರ್ ಸ್ಪಷ್ಟಪಡಿಸಿದ್ದಾರೆ.
ಈ ಬಾರಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ!
2022 ರಲ್ಲಿ ALTBalaji ಮತ್ತು MX Player ನಲ್ಲಿ ಧೂಳೆಬ್ಬಿಸಿದ್ದ ‘ಲಾಕ್ ಅಪ್’, ಇದೀಗ ಒಟಿಟಿ ದೈತ್ಯ ನೆಟ್ಫ್ಲಿಕ್ಸ್ (Netflix) ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದೊಂದು ಕೇವಲ ರಿಯಾಲಿಟಿ ಶೋ ಅಲ್ಲ, ಬದಲಿಗೆ ಇದೊಂದು ವಿಶಿಷ್ಟ ಸಾಮಾಜಿಕ ಪ್ರಯೋಗ ಎಂದು ಏಕ್ತಾ ಕಪೂರ್ ಸಂತಸ ಹಂಚಿಕೊಂಡಿದ್ದಾರೆ. ಹೊಸ ಆಟಗಾರರೊಂದಿಗೆ ಶೋ ಇನ್ನಷ್ಟು ರೋಚಕವಾಗಿರಲಿದೆ.



