ಹೊಸದಿಗಂತ ವರದಿ ಕೊಪ್ಪಳ:
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೂತನ 33 ಕ್ರಸ್ಟ್ ಗೇಟ್ ಗಳ ಉದ್ಘಾಟನೆ ನಾಳೆ ನೆರವೇರಲಿದ್ದು, ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಗಣ್ಯರಿಗೆ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಸಂಗಣ್ಣ ಕರಡಿ ಸ್ವಾಗತ ಕೋರಿದ್ದಾರೆ.
ನಾಳಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಆಂಧ್ರ ಪ್ರದೇಶ ಸಿಎಂ ಚಂದ್ರು ಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ ರೆಡ್ಡಿ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ಸೇರಿ ಇತರ ಗಣ್ಯರು ಆಗಮಿಸುತ್ತಿದ್ದಾರೆ. ಈ ಗಣ್ಯರಿಗೆ ನಾಡಿನ ಜನತೆ ಹಾಗೂ ನಮ್ಮ ಪರವಾಗಿ ಹೃದಯಪೂರ್ವಕ ಸ್ವಾಗತ ಕೋರುತ್ತಿದ್ದೇವೆ ಎಂದಿದ್ದಾರೆ. ಜೊತೆಗೆ ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ್ದು, ಟಿಬಿ ಡ್ಯಾಂ ಗೆ ಆದ್ಯತೆ ನೀಡಿದಂತೆ ಸಿಂಗಟಾಲೂರು, ಹಿರೇಹಳ್ಳ ಹಾಗೂ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ 32 ಟಿಎಂಸಿ ಹೂಳಿಗೆ ಪರ್ಯಾಯವಾಗಿ ನಿರ್ಮಿಸಲು ಉದ್ದೇಶಿಸಿರುವ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ನನೆಗುದಿಗೆ ಬಿದ್ದಿದೆ. ಡಿಪಿಆರ್ ತಯಾರಾಗಿದ್ದರೂ ಯೋಜನೆ ಕಾರ್ಯಗತವಾಗುತ್ತಿಲ್ಲ. ಇದೀಗ ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳು ಒಂದೇ ವೇದಿಕೆಗೆ ಬಂದು ತುಂಗಭದ್ರಾ ಜಲಾಶಯದ ಕ್ರಸ್ಟಗೇಟ್ ಉದ್ಘಾಟಿಸುತ್ತಿರುವುದರಿಂದ ಇದೇ ವೇಳೆ ನವಲಿ ಸಮಾನಾಂತರ ಜಲಾಶಯದ ಕುರಿತು ನಿಲುವು ತಿಳಿಸಿ, ಯೋಜನೆ ಅನುಷ್ಟಾನಕ್ಕೆ ಮುಂದಾಗಬೇಕೆಂಬುದು ಜನರ ಒತ್ತಾಸೆಯಾಗಿದೆ ಎಂದಿದ್ದಾರೆ.
ಇನ್ನೂ ಆಲಮಟ್ಟಿಯಿಂದ ಕೆರೆ ತುಂಬಿಸುವ ಯೋಜನೆ ಆರಂಭವಾಗಿದ್ದು, ಶ್ಲಾಘನೀಯ. ಹೀಗಾಗಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದ್ದಲ್ಲಿ ರೈತರ ವರ್ಗಕ್ಕೆ ಇನ್ನಷ್ಟು ಅನುಕೂಲವಾಗಲಿದೆ. ಇದಲ್ಲದೇ ತುಂಗಭದ್ರಾ ಜಲಾಶಯಕ್ಕೆ ಹೋಲಿಕೆ ಮಾಡಿದರೆ ಆಲಮಟ್ಟಿ ಜಲಾಶಯಕ್ಕೆ ಒಂದು ತಿಂಗಳು ಮುಂಚಿತವಾಗಿ ಒಳ ಹರಿವು ಬರುವುದರಿಂದ ಆಲಮಟ್ಟಿ ಜಲಾಶಯದಿಂದ ನದಿಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಬಳಕೆ ಮಾಡುವ ನಿಟ್ಟಿನಲ್ಲಿ ತುಂಗಭದ್ರಾ ಜಲಾಶಯಕ್ಕೆ ಆಲಮಟ್ಟಿಯಿಂದ ನೀರು ಬರುವಂತೆ ಮಾಡಬೇಕಿದೆ. ಇದಕ್ಕಾಗಿ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳನ್ನು ಜೋಡಿಸುವ ಕಾರ್ಯಕ್ಕೂ ಸರ್ಕಾರ ಮುಂದಾದಲ್ಲಿ ಭವಿಷ್ಯದಲ್ಲಿ ರೈತಾಪಿ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.



