ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಗಿರಿ ತಾಲ್ಲೂಕಿನ ಕಾಕನೂರ ಗ್ರಾಮದಲ್ಲಿ ದರೋಡೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕಳ್ಳರ ಗುಂಪೊಂದು ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿ 8.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದ ಸಾವಿತ್ರಮ್ಮ (60) ಹಾಗೂ ಮಾದಪ್ಪ (62) ಎಂಬ ದಂಪತಿಯ ಮನೆಗೆ ಐವರು ಮುಸುಕುಧಾರಿಗಳು ನುಗ್ಗಿ, ಮೊದಲಿಗೆ ಹಲ್ಲೆ ನಡೆಸಿ ಅವರ ಕೈಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಅಪ್ರತೀಕ್ಷಿತ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ ಸಂತೆಬೆನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶ್ವಾನದಳದ ಸಹಾಯದಿಂದ ಪರಿಶೀಲನೆ ನಡೆಸಿದ್ದಾರೆ. ದರೋಡೆ ಗ್ಯಾಂಗ್‌ನ್ನು ಪತ್ತೆಹಚ್ಚಿ ಬಂಧಿಸಲು ಜಿಲ್ಲಾ ಎಸ್‍ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.