June 24, 2026
Wednesday, June 24, 2026
spot_img

ಆರ್‌ಎಸ್‌ಎಸ್ ಬಗ್ಗೆ ಅನಗತ್ಯ ಟೀಕೆ ಬೇಡ: ಕಾಂಗ್ರೆಸ್ ವಿರುದ್ಧ ಕಾರಜೋಳ ಕಿಡಿ

ಹೊಸದಿಗಂತ ವರದಿ ಚಿತ್ರದುರ್ಗ:

ಕಾಂಗ್ರೆಸ್ ನವರು ಬಿಜೆಪಿ ಪಕ್ಷ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಎದುರಿಸಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಆರ್‌ಎಸ್‌ಎಸ್ ಕುರಿತು ಮಾತನಾಡುವುದು ಸರಿಯಲ್ಲ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ರಾಜಕೀಯ ಪಕ್ಷವಲ್ಲ. ಅದೊಂದು ಸ್ವಯಂ ಸೇವಕ ಸಂಘ. ಅದು ಧರ್ಮಾತೀತ, ಜಾತ್ಯಾತೀತವಾಗಿ ಕೆಲಸ ಮಾಡುತ್ತಿದೆ. ಅದರಲ್ಲಿನ ಸ್ವಯಂ ಸೇವಕರು ಮನೆ ಮಠ ಬಿಟ್ಟು, ಸನ್ಯಾಸಿಗಳ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಇಂತಹ ಸ್ವಯಂ ಸೇವಕರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಟೀಕೆ ಮಾಡುವುದು ಕಾಂಗ್ರೆಸ್ ನಾಯಕರಿಗೆ ಬಾಯಿ ಚಪಲವಾಗಿಬಿಟ್ಟಿದೆ. 14 ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, 12 ವರ್ಷಗಳಿಂದ ರಾಷ್ಟ್ರದ ಪ್ರಧಾನ ಮಂತ್ರಿಯಾಗಿ, ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿಯವರ ಬಗ್ಗೆ ಟೀಕೆ ಮಾಡುವುದು ಎಷ್ಟು ಸರಿ? ಅಹಿಂದ ಎನ್ನುವ ಕಾಂಗ್ರೆಸ್‌ನವರು, ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಸೋನಿಯಾ ಗಾಂದಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೆಚ್ಚಿಸಲಿಕ್ಕೆ ಈ ರೀತಿ ಟೀಕೆ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.

ನಾನು ಹುಟ್ಟು ಕಾಂಗ್ರೆಸಿಗ ಎಂದು ಬಿ.ಕೆ.ಹರಿಪ್ರಸಾದ್ ಹೇಳುತ್ತಿದ್ದಾರೆ. ಅವರು ರಾಜಕೀಯಕ್ಕೆ ಬಂದಿದ್ದೇ ಸಂಜಯ್ ಗಾಂಧಿ ಅವರಿಂದ. ನೆಹರು ಕುಟುಂಬದವರ ಎಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ. ಆದರೆ ಸಂಜಯ್ ಗಾಂಧಿಯವರ ಪುಣ್ಯತಿಥಿ ಏಕೆ ಮಾಡಲಿಲ್ಲ? ಪಿ.ವಿ.ನರಸಿಂಹರಾವ್ ಅವರ ಪುಣ್ಯತಿಥಿ ಮಾಡಿದರೆ ಮುಸ್ಲಿಂ ಮತಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ ಅವರ ಪುಣ್ಯತಿಥಿ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ನವರಿಗೆ ಕುಟುಕಿದರು.

ಇದನ್ನೂ ಓದಿ:

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ದೇಶದ ಜನ ಧರ್ಮ ಗ್ರಂಥ ಎಂದು ಒಪ್ಪಿಕೊಂಡಿದ್ದಾರೆ. ಅದನ್ನ ಕಾಂಗ್ರೆಸ್‌ನವರು ಹೇಳಬೇಕಾಗಿಲ್ಲ. ಆದರೆ ಮತಕೋಸ್ಕರ ಮಾತ್ರ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದೀರಿ. ಅವರನ್ನು ನೀವೇ ಸೋಲಿಸಿದ್ದಿರಿ. ಅವರಿಗೆ ಹಿಂಸೆ ಕೊಟ್ಟು ಅವರಿಗೆ ಬೇಡವಾದ ಕಾನೂನು ಮಂತ್ರಿ ಮಾಡಿದ್ದಿರಿ. ಹೀಗಿದ್ದೂ ನೀವು ಅಂಬೇಡ್ಕರ್ ಬಗ್ಗೆ ಮಾತನಾಡುತ್ತೀರಿ. ಇವೆಲ್ಲವಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಮುಖಂಡರು, ಹೈಕಮಾಂಡ್ ಅನ್ನಿಸಿಕೊಂಡವರು ಉತ್ತರ ನೀಡಬೇಕಿದೆ ಎಂದು ಒತ್ತಾಯಿಸಿದರು.

ಇತ್ತೀಚೆಗೆ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ರೈತರು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ರಾಜ್ಯದ ಜನರು ಟಾಟಾ ಪವರ್‌ಗೆ ಅರ್ಜಿ ಸಲ್ಲಿಸಬೇಡಿ. ರಾಜ್ಯ ಸರ್ಕಾರದ ಮೋಸದ ಆಟಕ್ಕೆ ಬಲಿಯಾಗಬೇಡಿ ಎಂದು ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಉಪಾಧ್ಯಕ್ಷರಾದ ಡಾ.ಸಿದ್ದಾರ್ಥ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಯಾದವ್, ಮಾಧುರಿ ಗೀರೀಶ್, ಮೋಹನ್ ಕುಮಾರ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಸಹ ವಕ್ತಾರ ನವೀನ್ ಚಾಲುಕ್ಯ, ಎಸ್.ಸಿ.ಮಾರ್ಚಾದ ಅಧ್ಯಕ್ಷ ಪರಶುರಾಮ್ ಉಪಸ್ಥಿತರಿದ್ದರು.

ರಾಹುಲ್ ಗಾಂಧಿ ರಿಜೆಕ್ಟೆಡ್ ಗೂಡ್ಸ್ :

ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಪ್ರಧಾನಿ ಮಾಡಲು ನೋಡುತ್ತಿದೆ. ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ. ರಾಹುಲ್ ಗಾಂಧಿ ರಿಜೆಕ್ಟೆಡ್ ಗೂಡ್ಸ್ ಇದ್ದಂತೆ. ದೇಶದ ಜನ ಅವರನ್ನು ರಿಜೆಕ್ಟ್ ಮಾಡಿದ್ದಾರೆ. ಕಾಂಗ್ರೆಸ್ ಸಹ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ನ ಅವಹೇಳನ ನಿಮ್ಮ ಅವನತಿಗೆ ಕಾರಣ. ಇನ್ನು ಕೆಲವು ದಿವಸ ಕಳೆದರೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚುವವರು ಇಲ್ಲದಂತಾಗುತ್ತದೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !