ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆ.ಆರ್.ಪುರಂನದಲ್ಲಿ ನಡೆದ ತ್ರಿಬಲ್ ಮರ್ಡರ್ ಕೇಸ್‌ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಕೆನೆತ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಶ್ವೇತಾ ಪುದುಚೇರಿಯಲ್ಲಿ ಸಿಕ್ಕಿಬಿದ್ದಿದ್ದರು. ಈಗ ಅದೇ ಊರಿನಲ್ಲಿ ಕೇನೆತ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ವೇತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ನಡುವೆ ಕೆನೆತ್ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿದ್ದ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದರು.
ಪೊಲೀಸರ ತನಿಖೆ ವೇಳೆ ಶ್ವೇತಾ ಮತ್ತು ಕೆನೆತ್ ಇಬ್ಬರೂ ಬೆಂಗಳೂರಿನಿಂದ ಬೈಕ್‌ನಲ್ಲಿ ಪುದುಚೇರಿಗೆ ತೆರಳಿರುವುದು ಗೊತ್ತಾಗಿದೆ. ಕೆನೆತ್ ಶ್ವೇತಾಳನ್ನು ಪುದುಚೇರಿವರೆಗೆ ಕರೆದೊಯ್ದಿದ್ದನು.ಪುದುಚೇರಿಯಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಯಾವ ಕಾರಣಕ್ಕೆ ಗಲಾಟೆಯಾಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ. ಕೊಲೆ ಪ್ರಕರಣದ ವಿಚಾರದಲ್ಲೇ ಮಾತಿನ ಚಕಮಕಿ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಹಿನ್ನೆಲೆ
ಕೆನೆತ್ ಎನ್ನುವ ಯುವಕನ ಜೊತೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಆರೋಪಿ ಶ್ವೇತಾ ಆತನ ಜತೆ ಸೇರಿ 30 ಲಕ್ಷ ರೂ. ಸಾಲ ಮಾಡಿದ್ದಳು. ಆ ಸಾಲವನ್ನು ತೀರಿಸಲು ಮನೆಯವರ ಬಳಿ ಆಸ್ತಿಯಲ್ಲಿ ಪಾಲು ಬೇಕೆಂದು ಆಗಾಗ ಜಗಳವಾಡುತ್ತಿದ್ದಳು. ಆಸ್ತಿಯಲ್ಲಿ ಪಾಲು ಕೊಡಲು ಒಪ್ಪದಿದ್ದಕ್ಕೆ ತಂದೆ, ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಇನ್ನು ಪೋಷಕರು ಲಿವ್ ಇನ್ ಸಂಬಂಧಕ್ಕೂ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.



