June 28, 2026
Sunday, June 28, 2026
spot_img

ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿಗೆ ಆಗ್ರಹ: ಕನ್ನಡ ಸಂಘಟನೆಗಳ ಹೋರಾಟಕ್ಕೆ 100 ದಿನದ ಸಂಭ್ರಮ; ವಿಘ್ನೇಶ್ವರನಿಗೆ 101 ಈಡುಗಾಯಿ ಸೇವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ನಿರಂತರ ಹೋರಾಟವು ಯಶಸ್ವಿಯಾಗಿ ನೂರು ದಿನಗಳನ್ನು ಪೂರ್ಣಗೊಳಿಸಿದ್ದು, ಶುಕ್ರವಾರ ವಿಘ್ನೇಶ್ವರನ ಸನ್ನಿಧಿಗೆ ತಲುಪಿದೆ.

ಕಳೆದ ಮಾರ್ಚ್ 26 ರಿಂದ ಆರಂಭವಾದ ಈ ಐತಿಹಾಸಿಕ ಹೋರಾಟಕ್ಕೆ ಜೂನ್ 26 ರಂದು 100 ದಿನಗಳು ಸಂದ ಹಿನ್ನೆಲೆಯಲ್ಲಿ, ಕನ್ನಡ ಸಂಘಟನೆಗಳ ಮುಖಂಡರು ಶುಕ್ರವಾರ ಬೆಳಿಗ್ಗೆ ನಗರದ ಐತಿಹಾಸಿಕ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗಾವಿ ಪಾಲಿಕೆಯ ಮಹಾಪೌರರು ಮತ್ತು ಉಪ ಮಹಾಪೌರರಿಗೆ ಸದ್ಬುದ್ಧಿ ನೀಡಲಿ ಎಂದು ಪ್ರಾರ್ಥಿಸಿದ ಹೋರಾಟಗಾರರು, ದೇವಸ್ಥಾನದ ಮುಂಭಾಗದಲ್ಲಿ 101 ಈಡುಗಾಯಿಗಳನ್ನು ಒಡೆಯುವ ಮೂಲಕ ತಮ್ಮ ಆಕ್ರೋಶ ಹಾಗೂ ಸಂಕಲ್ಪವನ್ನು ಪ್ರದರ್ಶಿಸಿದರು.

ಮಹಾಜನ ವರದಿಯೇ ಅಂತಿಮ: ಅಶೋಕ ಚಂದರಗಿ:

ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರು,”ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಗಡಿ ವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ ಎಂಬ ಅಧಿಕೃತ ಗೊತ್ತುವಳಿಯನ್ನು ಪಾಲಿಕೆಯಲ್ಲಿ ಅಂಗೀಕರಿಸುವವರೆಗೂ ಕನ್ನಡ ಸಂಘಟನೆಗಳ ಈ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈಗಲಾದರೂ ಬಿಜೆಪಿ ನಾಯಕರು ಗಡಿಭಾಗದ ಹಾಗೂ ಇಡೀ ನಾಡಿನ ಕನ್ನಡಿಗರ ಭಾವನೆಗಳನ್ನು ಗೌರವಿಸಿ, ಪಾಲಿಕೆಯಲ್ಲಿ ತಕ್ಷಣವೇ ಗೊತ್ತುವಳಿ ಅಂಗೀಕರಿಸಬೇಕು,” ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಉಗ್ರ ಹೋರಾಟದ ಎಚ್ಚರಿಕೆ :

ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಮಾತನಾಡಿ, ಪಾಲಿಕೆ ಆಡಳಿತ ಮಂಡಳಿ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಬಾರದು. ಒಂದು ವೇಳೆ ಶೀಘ್ರದಲ್ಲೇ ಗೊತ್ತುವಳಿ ಪಾಸ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಕನ್ನಡ ಸಂಘಟನೆಗಳ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ವಾಜಿದ್ ಹಿರೆಕೋಡಿ, ಬಲರಾಮ ಮಾಸೇನಟ್ಟಿ, ಶ್ರೀನಿವಾಸ ತಾಳುಕರ, ಮೈನು ಮಕಾನದಾರ, ಮಹೇಶ ಶೀಗಿಹಳ್ಳಿ, ಬಾಳಪ್ಪ ಗುಡಗೇನಟ್ಟಿ, ಮಲ್ಲಪ್ಪ ಗುಡಗೇನಟ್ಟಿ, ಸಿಡ್ಲಿಂಗಪ್ಪ ಸುಣಕುಪ್ಪಿ, ಶರೀಫ್ ಸನದಿ, ಸಂತೋಷ ತಳ್ಳಿಮನಿ, ಶಿವಾಜಿ ಗುರವ, ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ರಾಜು ಕೋಲಾ ಹಾಗೂ ಸರ್ವಮಂಗಳ ಅರಳಿಮಟ್ಟಿ ಸೇರಿದಂತೆ ನೂರಾರು ಕನ್ನಡಪರ ಸಂಘಟನೆಯ ಕಾರ್ಯಕರ್ತರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !