June 28, 2026
Sunday, June 28, 2026
spot_img

“ಮುಖ್ಯಮಂತ್ರಿ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ”: ಮಾಜಿ ಸಿಎಂ ಸಿದ್ದರಾಮಯ್ಯ ಭಾವನಾತ್ಮಕ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಯಾದ ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಈ ಭರ್ಜರಿ ಸ್ವಾಗತದಿಂದ ಮೂಕವಿಸ್ಮಿತರಾಗಿರುವ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣವಾದ ಎಕ್ಸ್  ಮೂಲಕ ತಮ್ಮ ಅತ್ಯಂತ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಜನರ ಪ್ರೀತಿಯೇ ನಿರಂತರ:

“ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ. ಅಲ್ಲಿಂದ ನನ್ನನ್ನು ಯಾರೂ ಕೆಳಗಿಳಿಸಲಾರರು. ಅದು ನನ್ನ ಮತ್ತು ನಾನು ನಂಬುವ ಜನತಾ ಜನಾರ್ಧನರ ನಡುವಿನ‌ ಶಾಶ್ವತ ಒಪ್ಪಂದ” ಎಂದು ಸಿದ್ದರಾಮಯ್ಯ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ರಾಜಕೀಯ ಅಧಿಕಾರ ಎನ್ನುವುದು ಕೇವಲ ಜನರ ಸೇವೆ ಮಾಡಲು ಸಿಕ್ಕ ಅವಕಾಶದ ಭಾಗ್ಯ ಎಂದು ತಾವು ಭಾವಿಸಿರುವುದಾಗಿ ಅವರು ತಿಳಿಸಿದ್ದಾರೆ.

ಅಧಿಕಾರಕ್ಕಿಂತ ದೊಡ್ಡದು ಜನಸಮೂಹ:

ಪದತ್ಯಾಗದ ನಂತರ ತಾವು ಹೋದ ಕಡೆಯಲ್ಲೆಲ್ಲಾ ಜನ ತೋರುತ್ತಿರುವ ಅಕ್ಕರೆ ಮತ್ತು ಅಭಿಮಾನವನ್ನು ಕಂಡು ತಮಗೆ ಸಾರ್ಥಕ್ಯದ ಭಾವನೆ ಮೂಡಿದೆ ಎಂದಿದ್ದಾರೆ. “ಅಧಿಕಾರ, ಸಂಪತ್ತು ಕಾಲ ಬದಲಾದಂತೆ ಕಳೆದು ಹೋಗಬಹುದು, ಆದರೆ ಜನರ ಪ್ರೀತಿ ನಿರಂತರವಾಗಿರುತ್ತದೆ. ನನ್ನ ಸಾರ್ವಜನಿಕ ಬದುಕಿನಲ್ಲಿ ಇಷ್ಟೊಂದು ದೊಡ್ಡ ಜನಸಮೂಹದ ಪ್ರೀತಿಯನ್ನು ಸಂಪಾದಿಸಿರುವುದೇ ನನ್ನ ಪಾಲಿನ ಅತಿ ದೊಡ್ಡ ಹೆಮ್ಮೆ” ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

ಇದನ್ನೂ ಓದಿ:

ಮೈಸೂರಲ್ಲಿ ಅದ್ಧೂರಿ ಮೆರವಣಿಗೆ:

ತವರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರಿಗೆ ಡೊಳ್ಳು ಕುಣಿತ, ವೀರಗಾಸೆ ಕಲಾತಂಡಗಳು ಹಾಗೂ ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರಿಂದ ಅದ್ಧೂರಿ ಸ್ವಾಗತ ಸಿಕ್ಕಿತು. ಮುಖಂಡರಾದ ಹೆಚ್.ಸಿ. ಮಹದೇವಪ್ಪರೊಂದಿಗೆ ತೆರೆದ ವಾಹನದಲ್ಲಿ ಬಂದ ಸಿದ್ದರಾಮಯ್ಯಗೆ ಬೃಹತ್ ಗಾತ್ರದ ಸೇಬಿನ ಹಾರವನ್ನು ಹಾಕಿ ಅಭಿಮಾನಿಗಳು ಜಯಘೋಷ ಕೂಗಿದರು. ಈ ಅಭೂತಪೂರ್ವ ಪ್ರೀತಿಯನ್ನು ಕಂಡ ಸಿದ್ದರಾಮಯ್ಯ, ನಾಡಿನ ಜನರ ಸೇವೆಗೆ ನಾನು ಸದಾ ಬದ್ಧ ಎಂದು ತಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !