ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್‌ನ ಯುವ ಬ್ಯಾಟಿಂಗ್ ಸೆನ್ಸೇಷನ್, 15 ವರ್ಷದ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪಾದಾರ್ಪಣೆ ಕುರಿತು ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಸಂಜು ಸಾಮ್ಸನ್, ಅಭಿಷೇಕ್ ಶರ್ಮಾಗೆ ಬೆಂಬಲ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, “ಪ್ರಸ್ತುತ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಸಂಜು ಸಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಯಾವುದೇ ತಪ್ಪು ಮಾಡಿಲ್ಲ. ವಿಶ್ವಕಪ್ ಗೆದ್ದ ಈ ಅನುಭವಿ ಜೋಡಿಯನ್ನು ಒಂದೆರಡು ಪಂದ್ಯಗಳ ವೈಫಲ್ಯಕ್ಕಾಗಿ ಕೈಬಿಡುವುದು ತಪ್ಪು. ಯುವ ಆಟಗಾರರ ಸೇರ್ಪಡೆಯ ಅವಸರದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಹಿರಿಯರನ್ನು ಕಡೆಗಣಿಸಬಾರದು” ಎಂದು ಆಗ್ರಹಿಸಿದ್ದಾರೆ.
ತಂಡದಲ್ಲಿ ‘ಸೂಪರ್‌ಸ್ಟಾರ್ ಸಂಸ್ಕೃತಿ’ ಬೇಡ
ಸಣ್ಣ ಕಾರಣಗಳಿಗಾಗಿ ಪದೇ ಪದೇ ತಂಡ ಬದಲಾಯಿಸುವುದರಿಂದ ಡ್ರೆಸ್ಸಿಂಗ್ ರೂಮ್ ವಾತಾವರಣ ಹಾಳಾಗುತ್ತದೆ ಎಂದಿರುವ ಅಶ್ವಿನ್, ತಂಡದಲ್ಲಿ ‘ಸೂಪರ್‌ಸ್ಟಾರ್ ಸಂಸ್ಕೃತಿ’ ಇರಬಾರದು ಎಂದು ಎಚ್ಚರಿಸಿದ್ದಾರೆ. ಯುವ ಆಟಗಾರರು ಬೆಂಚ್ ಮೇಲೆ ಕುಳಿತು ಹಿರಿಯರಿಂದ ಕಲಿಯುವುದು ಸಾಕಷ್ಟಿದೆ. ಸದ್ಯಕ್ಕೆ ಮಾಧ್ಯಮಗಳ ಅತಿಯಾದ ಪ್ರಚಾರದಿಂದ ಸೂರ್ಯವಂಶಿಯವರನ್ನು ದೂರವಿಡಬೇಕು ಎಂದು ಅವರು ತಿಳಿಸಿದ್ದಾರೆ.
ಯುವ ಆಟಗಾರನಿಗಾಗಿ ಅಶ್ವಿನ್ ಮಾಸ್ಟರ್ ಪ್ಲಾನ್
ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದು ಇತಿಹಾಸ ಸೃಷ್ಟಿಸಿರುವ ವೈಭವ್ ಸೂರ್ಯವಂಶಿಯನ್ನು ನೇರವಾಗಿ ಐರ್ಲೆಂಡ್ ಅಥವಾ ಇಂಗ್ಲೆಂಡ್‌ನಂತಹ ಕಠಿಣ ಸರಣಿಗಳಿಗೆ ಕಳುಹಿಸಬಾರದು. ಬದಲಿಗೆ, ಮುಂಬರುವ ಜಿಂಬಾಬ್ವೆ ಪ್ರವಾಸ ಅಥವಾ ಏಷ್ಯನ್ ಗೇಮ್ಸ್‌ನಂತಹ ಪಂದ್ಯಗಳಲ್ಲಿ ಮೊದಲ ಅವಕಾಶ ನೀಡಬೇಕು. ಇದರಿಂದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒತ್ತಡವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ಅಶ್ವಿನ್ ಸಲಹೆ ನೀಡಿದ್ದಾರೆ.



