ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಾರೇ ಆಗಲಿ ಕಾನೂನಿನ ಇತಿಮಿತಿಯಲ್ಲೇ ಇರಬೇಕು. ಪ್ರಚೋದನೆ ನೀಡುವುದು ಅಥವಾ ತೊಡೆ ತಟ್ಟುವುದು ತಪ್ಪು. ಆದರೆ, ಜನರನ್ನು ಎತ್ತಿಕಟ್ಟಿ ಒಬ್ಬ ಶಾಸಕನ ಮೇಲೆ ದಾಳಿ ಮಾಡಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.
ಜೆಡಿಎಸ್ ವಿರುದ್ಧ ವಾಗ್ದಾಳಿ
ಜೆಡಿಎಸ್ ನಾಯಕರ ನಡವಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, “ಜೆಡಿಎಸ್‌ಗೆ ಸದ್ಯ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ನಾಯಕರ ಮೇಲೆ ಹೀಗೆ ಟೀಕೆ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸಿಎಂ ಆದಾಗಿನಿಂದ ಇವರ ವರ್ತನೆ ಮತ್ತಷ್ಟು ಹೆಚ್ಚಾಗಿದೆ” ಎಂದು ಲೇವಡಿ ಮಾಡಿದರು.
ಬಿಜೆಪಿ ನಾಯಕರ ರಾಜೀನಾಮೆಗೆ ಆಗ್ರಹ
ಇದೇ ವೇಳೆ ಬಿಜೆಪಿಯ ಅಡ್ಡ ಮತದಾನ ಪ್ರಕರಣದ ವರದಿ ಕುರಿತು ಮಾತನಾಡಿದ ಅವರು, “ಬಿಜೆಪಿ ನಾಯಕರ ನಿರ್ಲಕ್ಷ್ಯದಿಂದಲೇ ಅಡ್ಡ ಮತದಾನವಾಗಿದೆ ಎಂದು ಅವರ ವರದಿಯಲ್ಲೇ ಹೇಳಲಾಗಿದೆ. ಹಾಗಾದರೆ ಆ ನಿರ್ಲಕ್ಷ್ಯಕ್ಕೆ ಹೊಣೆ ಯಾರು? ಅವರ ಪಕ್ಷದ ನಾಯಕರೇ ಅಲ್ಲವೇ? ನೈತಿಕ ಜವಾಬ್ದಾರಿ ಹೊತ್ತು ಬಿಜೆಪಿ ನಾಯಕರು ತಕ್ಷಣ ರಾಜೀನಾಮೆ ನೀಡಲಿ” ಎಂದು ಖಡಕ್ ಆಗಿ ಸವಾಲು ಹಾಕಿದರು.



