ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಚುನಾವಣಾ ಆಯೋಗದ ಆದೇಶದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಜೂನ್ 30ರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ. ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಹೊಸ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮೃತಪಟ್ಟವರ ಹೆಸರು ಕೈಬಿಡಲು ಈ ಸಂದರ್ಭದಲ್ಲಿ ಎಸ್‌ಐಆರ್ ಅರ್ಜಿ ಸಲ್ಲಿಸಬಹುದು.
ಸಹಾಯವಾಣಿ ಕೇಂದ್ರ ಮತ್ತು ಸಂಪರ್ಕದ ವಿವರ
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ಅವರ ಪ್ರಕಾರ, ಸಾರ್ವಜನಿಕರ ದೂರುಗಳ ನಿವಾರಣೆಗೆ ವಿಶೇಷ ಸಹಾಯವಾಣಿ ತೆರೆಯಲಾಗಿದೆ. ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು.
- ಸಹಾಯವಾಣಿ ಸಂಖ್ಯೆ: 080-22967200 (ಕಚೇರಿ ವೇಳೆ)
- ಇ-ಮೇಲ್: [email protected]
- ಸೋಷಿಯಲ್ ಮೀಡಿಯಾ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (X) ಖಾತೆಗಳ ಮೂಲಕ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
ಅರ್ಜಿ ಜೊತೆಗೆ ಆಧಾರ್ ಕಾರ್ಡ್, ವೋಟರ್ ಐಡಿ, ವಾಸಸ್ಥಳ ದೃಢೀಕರಣ ಪತ್ರ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಧಿಕಾರಿಗಳಿಗೆ ನೀಡಬೇಕು. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿದ್ದರೆ ಅಂತಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ.
ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ
ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಪ್ರಕಟಿಸಿರುವ ವೇಳಾಪಟ್ಟಿ ಹೀಗಿದೆ:
- ಜೂನ್ 30 – ಜುಲೈ 29: ಮನೆ ಮನೆಗೆ ಭೇಟಿ, ದಾಖಲೆ ಸಂಗ್ರಹ.
- ಆಗಸ್ಟ್ 5: ಕರಡು ಮತದಾರರ ಪಟ್ಟಿ ಪ್ರಕಟಣೆ ಹಾಗೂ ಆಕ್ಷೇಪಣೆಗೆ ಅವಕಾಶ (ಸೆಪ್ಟೆಂಬರ್ 4 ರವರೆಗೆ).
- ಅಕ್ಟೋಬರ್ 7: ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಮತದಾನದ ಹಕ್ಕಿಗಾಗಿ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದ್ದು, ಸಾರ್ವಜನಿಕರು ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಲು ಕೋರಲಾಗಿದೆ.



