ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (IWT) ವಿಚಾರವಾಗಿ ಪಾಕಿಸ್ತಾನ ಮತ್ತೊಮ್ಮೆ ಭಾರತದ ವಿರುದ್ಧ ತನ್ನ ಉದ್ಧಟತನ ಪ್ರದರ್ಶಿಸಿದೆ. ಇಸ್ಲಾಮಾಬಾದ್ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್, “ನಮ್ಮ ಪಾಲಿನ ನೀರನ್ನು ಕಸಿದುಕೊಳ್ಳಲು ಬಂದರೆ ಅಂತಹವರ ಕೈಗಳನ್ನು ಕತ್ತರಿಸುತ್ತೇವೆ” ಎಂದು ನೇರವಾಗಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಪ್ರಧಾನಿ ಮೋದಿ ನಿಲುವಿಗೆ ಹತಾಶೆ
ಕಳೆದ ವರ್ಷ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯ ನಂತರ, ಭಾರತವು ಈ ಒಪ್ಪಂದವನ್ನು ಅಮಾನತುಗೊಳಿಸಿದೆ. ಇದರಿಂದ ಹತಾಶೆಗೊಂಡಿರುವ ಪಾಕ್ ಸಚಿವರು, “ನೆರೆ ದೇಶದ ಪ್ರಧಾನಿಯವರ ಕೈಯಲ್ಲಿ ನೀರಿನ ನಲ್ಲಿ (ಟ್ಯಾಪ್) ಇದೆ. ಅವರು ನಮಗೆ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎನ್ನುತ್ತಿದ್ದಾರೆ. ನಮ್ಮ ದೇಶದ ಶೇ. 50 ರಷ್ಟು ಉದ್ಯೋಗ ಮತ್ತು ಆರ್ಥಿಕತೆ ಕೃಷಿಯನ್ನೇ ಅವಲಂಬಿಸಿದೆ” ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಈ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಶ್ನಿಸುವುದಾಗಿ ಅವರು ತಿಳಿಸಿದ್ದಾರೆ.
ಏಕಪಕ್ಷೀಯ ರದ್ದು ಸಾಧ್ಯವಿಲ್ಲ ಎಂದ ತರಾರ್
ಇದೇ ವೇಳೆ ಮಾತನಾಡಿದ ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್, 1960ರ ಸಿಂಧೂ ಒಪ್ಪಂದವು ಕಾನೂನುಬದ್ಧವಾಗಿದ್ದು, ಇದನ್ನು ಭಾರತ ಏಕಪಕ್ಷೀಯವಾಗಿ ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ. ಅಲ್ಲದೆ, ಪಾಕ್ ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರಿಗೆ ನೀರು ಎಂಬುದು “ರೆಡ್ ಲೈನ್” ಆಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಭಾರತದ ಕಠಿಣ ನಿಲುವಿನಿಂದಾಗಿ ಪಾಕಿಸ್ತಾನದಲ್ಲಿ ತೀವ್ರ ಆರ್ಥಿಕ ಹಾಗೂ ಆಹಾರ ಭದ್ರತೆಯ ಭೀತಿ ಎದುರಾಗಿದೆ.



